ಉದ್ಯೋಗಿಗೆ ಹೊಚ್ಚಹೊಸ ಬೆಂಝ್ ಕಾರನ್ನೇ ಗಿಫ್ಟ್ ಕೊಟ್ಟ ಮಾಲೀಕ!

MyG
Published on

ಕೊಚ್ಚಿ: ದುಬಾರಿ ಗಿಫ್ಟ್​ ನೀಡುವಿಕೆ ವಿರಳವೇನಲ್ಲ. ಆದರೆ ಅದು ಸಾಮಾನ್ಯವಾಗಿ ಪ್ರೇಮಿಗಳ ನಡುವೆ, ದಂಪತಿಯ ಮಧ್ಯೆ ಅಥವಾ ಮನೆಯೊಳಗಿನ ಮಂದಿಗಷ್ಟೇ ನೀಡಲಾಗುತ್ತದೆ. ಆದರೆ ಇಲ್ಲೊಂದು ಕಡೆ ಕಂಪನಿಯೊಂದರ ಮಾಲೀಕ ತನ್ನ ಉದ್ಯೋಗಿಗೇ ಬಲು ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಹೌದು.. ಕಂಪನಿಯೊಂದರ ಮಾಲೀಕ ತನ್ನ ಉದ್ಯೋಗಿಗೆ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಹೊಚ್ಚಹೊಸ ಬೆಂಝ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೀಗೆ ದುಬಾರಿ ಗಿಫ್ಟ್​ ಕೊಟ್ಟ ಕೇರಳದ ಆ ಉದ್ಯಮಿಯ ಹೆಸರು ಎ.ಕೆ.ಶಾಜಿ. ಮೈಜಿ ಎಂಬ ಗೃಹಬಳಕೆ ಉತ್ಪನ್ನಗಳ ಮಳಿಗೆಯೊಂದರ ಮಾಲೀಕರಾಗಿರುವ ಇವರು ತನ್ನ ಉದ್ಯೋಗಿ ಸಿ.ಆರ್.ಅನೀಶ್ ಎಂಬವರಿಗೆ ಬೆಂಝ್ ಕಾರು ಗಿಫ್ಟ್ ಆಗಿ ನೀಡಿದ್ದಾರೆ.

ನಾನು ಮೈಜಿ ಕಂಪನಿ ಶುರು ಮಾಡುವುದಕ್ಕೂ ಮೊದಲೇ ಅನೀಶ್ ನನ್ನೊಂದಿಗಿದ್ದರು. ಕಳೆದ 22 ವರ್ಷಗಳಿಂದ ನನ್ನ ಜತೆಗಿರುವ ಇವರು ಉದ್ಯೋಗಿಯಲ್ಲ, ನನ್ನ ಪಾಲುದಾರರ ಥರ. ಇವರು ಮಾರ್ಕೆಟಿಂಗ್, ಮೇಂಟೆನೆನ್ಸ್ ಮತ್ತು ಬಿಜಿನೆಸ್ ಡೆವೆಲಪ್​ಮೆಂಟ್ ಸೇರಿ ಕಂಪನಿಯ ಹಲವಾರು ವಿಭಾಗಗಳಲ್ಲಿ ಪರಿಶ್ರಮ ವಹಿಸಿ ದುಡಿದಿದ್ದಾರೆ ಎಂದು ಶಾಜಿ ಹೇಳಿದ್ದಾರೆ.

ಅನೀಶ್ ಒಂದು ದಿನವೂ ನಾನು ಬೇಸರ ಪಡುವಂತೆ ಮಾಡಲಿಲ್ಲ. ಆಧಾರಸ್ತಂಭದಂತೆ ನನ್ನ ಜತೆಗೇ ಇದ್ದು, ಸಹೋದರ ಪ್ರೀತಿಯನ್ನು ತೋರಿದ್ದಾರೆ. ಅವರಿಲ್ಲದಿದ್ದರೆ ನಾನು ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದಾಗಿ ಶಾಜಿ ಹೇಳಿಕೊಂಡಿದ್ದಾರೆ. ನೌಕರರ ಬಗ್ಗೆ ಈ ರೀತಿಯ ಪ್ರೀತಿ ತೋರುವ ಇಂಥ ಮಾಲೀಕರ ಜತೆ ಕೆಲಸ ಮಾಡುವುದೇ ಒಂದು ಉತ್ತಮ ಅನುಭವ ಅವಕಾಶ ಎಂದು ಅನೀಶ್ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net