ಆರ್‌ಬಿಐ ರೆಪೋ ದರ ಶೇ. 6ಕ್ಕೆ ಇಳಿಕೆ; ಕಡಿಮೆಯಾಗಲಿವೆ ಗೃಹ ಸಾಲದ EMIಗಳು; RBI

repo
Published on

ಮಾನಿಟರಿ ಪಾಲಿಸಿ ಸಮಿತಿಯ ಸಭೆ ಬಳಿಕ ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರೆಪೋದರವನ್ನು 25 ಮೂಲಾಂಕಗಳಷ್ಟು ಇಳಿಸಿರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

RBI | ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ (9) ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತವನ್ನು ಘೋಷಿಸಿದೆ. ಇದು ಸಮಾನ ಮಾಸಿಕ ಕಂತುಗಳನ್ನು (EMI) ಪಾವತಿಸುವವರಿಗೆ ಅನುಕೂಲವಾಗಲಿದೆ. RBI ತನ್ನ ಏಪ್ರಿಲ್ 2025 ರ MPC ಯಲ್ಲಿ ರೆಪೋ ದರ ಕಡಿತವನ್ನು ಘೋಷಣೆ ಮಾಡಿದೆ. ಇದು ಮನೆ, ವಾಹನ ಮತ್ತು ವೈಯಕ್ತಿಕ ಸಾಲಗಳ EMI ಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ. ಹೀಗಾಗಿ ಅಸ್ತಿತ್ವದಲ್ಲಿರುವ ಮತ್ತು ಹೊಸ ಸಾಲಗಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರಗಳನ್ನು25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಸೋಮವಾರ ಮತ್ತು ನಿನ್ನೆ ನಡೆದ ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕಮಿಟಿ ನಿರ್ಧಾರಗಳನ್ನು ಪ್ರಕಟಿಸಿ, ರೆಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದಾಗಿ ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ 25 ಮೂಲಾಂಕಗಳಷ್ಟು ಬಡ್ಡಿದರವನ್ನು ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಆರ್​​ಬಿಐನಿಂದ ಇದು ಸತತ ಎರಡನೇ ರೆಪೋ ದರ ಇಳಿಕೆ ಆಗಿದೆ.

ರೆಪೋ ದರ ಎಂದರೇನು?

ಇದು ಬ್ಯಾಂಕುಗಳು ಸಾಲಗಳ ಮೇಲೆ ವಿಧಿಸುವ ಮತ್ತು ಠೇವಣಿಗಳ ಮೇಲೆ ಪಾವತಿಸುವ ಬಡ್ಡಿದರಗಳನ್ನು ನಿರ್ಧರಿಸುತ್ತದೆ.

ರೆಪೋ ಎಂದರೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್ ಎಂದರ್ಥವಾಗಿದೆ. ಬ್ಯಾಂಕುಗಳಿಗೆ ಫಂಡಿಂಗ್ ಅವಶ್ಯಕತೆ ಇದ್ದಾಗ ಅವರು ಸರ್ಕಾರಿ ಬಾಂಡ್​​ಗಳನ್ನು ಆರ್​​ಬಿಐನಲ್ಲಿ ಅಡವಿಟ್ಟು ಸಾಲ ಪಡೆಯಬಹುದು. ಆದರೆ ಅಡವಿಡಲಾದ ಬಾಂಡ್ ಅಥವಾ ಸೆಕ್ಯೂರಿಟಿಗಳನ್ನು ಪೂರ್ವನಿಗದಿತ ದರಕ್ಕೆ ಮರುಖರೀದಿ ಮಾಡಲಾಗುವುದೆಂದು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅದಕ್ಕೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್ ಎಂದು ಕರೆಯಲಾಗುತ್ತದೆ.

ರೆಪೋ ದರ ಹೆಚ್ಚಾದರೆ, ಬ್ಯಾಂಕುಗಳು ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುತ್ತವೆ. ಇದು ಕಡಿಮೆಯಾದರೆ, ಬ್ಯಾಂಕುಗಳು ಬಡ್ಡಿದರಗಳನ್ನು ಕಡಿಮೆ ಮಾಡುತ್ತವೆ. ಹಾಗೆಯೇ ರೆಪೋ ದರಗಳು ಹೆಚ್ಚಾದಷ್ಟೂ, ನೀವು ಸಾಲಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತೀರಿ ರೆಪೋ ದರ ಕಡಿಮೆಯಾದಷ್ಟೂ ಅಗ್ಗದ ಸಾಲಗಳು ಸಿಗುತ್ತವೆ, ಆದರೆ ನಿಮ್ಮ ಉಳಿತಾಯವು ಕಡಿಮೆ ಬಡ್ಡಿಯನ್ನು ಗಳಿಸುತ್ತದೆ.

(ಏಜೆನ್ಸೀಸ್​)

ರೆಪೋ ದರವನ್ನು ಬದಲಾಯಿಸುವ ಮೊದಲು ಕೇಂದ್ರ ಬ್ಯಾಂಕ್ ಹಣದುಬ್ಬರ, ಆರ್ಥಿಕ ಬೆಳವಣಿಗೆ, ಜಾಗತಿಕ ಆರ್ಥಿಕತೆ ಮುಂತಾದ ಅಂಶಗಳನ್ನು ಪರಿಗಣಿಸುತ್ತದೆ. ಉದಾಹರಣೆಗೆ, ಜಾಗತಿಕ ಬಡ್ಡಿದರಗಳು ಹೆಚ್ಚಾದರೆ ದೇಶದಿಂದ ಹಣ ಹೊರಹೋಗುವುದನ್ನು ತಡೆಯಲು ಕೇಂದ್ರ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net