

ಶಿಕಾರಿಪುರ: ಪ್ರತಿ ಮಕ್ಕಳಲ್ಲೂ ಅಗಾಧ ಸಾಮರ್ಥ್ಯ, ಪ್ರತಿಭೆ ಇರುತ್ತದೆ. ಅದನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಒದಗಿಸಬೇಕು ಎಂದು ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ ಕಾರ್ಯದರ್ಶಿ ಗೀತಾ ಚನ್ನಯ್ಯ ಹೇಳಿದರು.
ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಸೂಕ್ತ ತರಬೇತಿ ನೀಡಿದರೆ ಎಂತಹ ಕಠಿಣವಾದ ವಿದ್ಯೆಯಾದರೂ ಕಲಿಯಬಲ್ಲರು. ಪಠ್ಯದ ಜತೆಗೆ ಬದುಕಿನ ಮಹತ್ವ ತಿಳಿಯಲು ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಕೆಲ ಮಕ್ಕಳಿಗೆ ಸಂತೆ ಪರಿಕಲ್ಪನೆ ಗೊತ್ತಿರುವುದಿಲ್ಲ. ಗ್ರಾಮೀಣ ಬದುಕಿನಲ್ಲಿ ಸಂತೆಗೆ ವಿಶೇಷ ಮಹತ್ವ ಇದ್ದು, ಪ್ರತಿ ವಾರದ ವಸ್ತುಗಳನ್ನು ಸಂತೆಯಲ್ಲಿ ಜನರು ಖರೀದಿ ಮಾಡುತ್ತಾರೆ. ಸಂತೆಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಮಕ್ಕಳಲ್ಲಿ ಆರ್ಥಿಕ, ವ್ಯಾಪಾರ ವಹಿವಾಟು ಕುರಿತು ಜಾಗೃತಿ ಮೂಡಿಸಲು ಸಹಕಾರಿಯಾಗುತ್ತದೆ ಎಂದರು.
ಶಾಲೆ ಮಕ್ಕಳು ಎಲ್ಲ ರೀತಿ ವಸ್ತುಗಳನ್ನು ತಂದು ಮಾರಾಟ ಮಾಡುತ್ತಾರೆ. ಆಗ ಲಾಭ-ನಷ್ಟದ ಅರಿವು ಮೂಡುತ್ತದೆ. ದಿನಸಿ ವಸ್ತುಗಳು, ತರಕಾರಿ ಎಲ್ಲಿಂದ ಹೆಚ್ಚು ಬರುತ್ತದೆ ಎನ್ನುವ ಮಾಹಿತಿ ನೀಡಲು ಸಹ ಅನುಕೂಲವಾಗಿದೆ. ಮಕ್ಕಳ ಜ್ಞಾನ ವೃದ್ಧಿಸುತ್ತದೆ ಎಂದು ತಿಳಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕರು, ಪಾಲಕರು ಮತ್ತು ಸಾರ್ವಜನಿಕರು ಮಕ್ಕಳಿಂದ ತರಕಾರಿ, ದಿನಬಳಕೆ ವಸ್ತುಗಳನ್ನು ಖರೀದಿಸಿದರು.