

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5ರ ಬೆಳಗ್ಗೆ 6 ಗಂಟೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲು ಸಜ್ಜಾಗಿದ್ದಾರೆ.
KSRTC, BMTC, NWKRTC ಹಾಗೂ KKRTC ನಾಲ್ಕು ನಿಗಮಗಳ ನೌಕರರು ಸೇರಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್ 5, 2025 ರಿಂದ ಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ನೌಕರರ ಪ್ರಮುಖ ಬೇಡಿಕೆಗಳು
ವೇತನ ಹೆಚ್ಚಳ: ಜನವರಿ 1, 2024 ರಿಂದ ಶೇ. 25% ವೇತನ ಹೆಚ್ಚಳವನ್ನು ಜಾರಿಗೊಳಿಸಬೇಕು.
ಅರಿಯರ್ಸ್ ಪಾವತಿ: ಜನವರಿ 1, 2020 ರಿಂದ ಬಾಕಿಯಿರುವ 38 ತಿಂಗಳ ವೇತನ ಹಿಂಬಾಕಿಯನ್ನು ತಕ್ಷಣವೇ ಪಾವತಿಸಬೇಕು.
ವಜಾಗೊಂಡ ನೌಕರರ ಪುನರ್‌ನೇಮಕ: ಹಿಂದಿನ ಮುಷ್ಕರಗಳ ಸಂದರ್ಭದಲ್ಲಿ ಕೆಲಸದಿಂದ ತೆಗೆದುಹಾಕಲಾದ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು.
ಇತರೆ ಬೇಡಿಕೆಗಳು: ವಿದ್ಯುತ್ ಚಾಲಿತ ಬಸ್‌ಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡದೆ ನಿಗಮದ ನೌಕರರಿಗೆ ವಹಿಸಬೇಕು, ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಯನ್ನು ನಿಲ್ಲಿಸಬೇಕು, ಮತ್ತು ಔಷಧಿ ವೆಚ್ಚಕ್ಕಾಗಿ ಮಾಸಿಕ 2,000 ರೂ. ಒದಗಿಸಬೇಕು.
ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರಾದ ಎಚ್.ವಿ. ಅನಂತ ಸುಬ್ಬರಾವ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬೇಡಿಕೆಗಳನ್ನು ಒತ್ತಿಹೇಳಿದ್ದಾರೆ.
ಮುಷ್ಕರಕ್ಕೆ ಕಾರಣ:
ಈ ಹಿಂದೆ, ನೌಕರರ ಬೇಡಿಕೆಗಳನ್ನು ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 4ರಂದು ಸಭೆ ಕರೆದು, 'ಆರು ದಿನದೊಳಗೆ ಮತ್ತೊಂದು ಸಭೆ ಕರೆಯುತ್ತೇನೆ' ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಸಭೆ ಕರೆಯದೇ ಇರುವುದರಿಂದ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮುಷ್ಕರಕ್ಕೆ ನಿರ್ಧಾರ ಮಾಡಿದ್ದಾರೆ. 'ನಾವು 25% ವೇತನ ಹೆಚ್ಚಳ ಕೇಳಿದ್ದೆವು. ಆದರೆ, ಬೊಮ್ಮಾಯಿ ಸರ್ಕಾರ ಶೇ.15ರಷ್ಟು ಹೆಚ್ಚಳ ಮಾಡಿತು. ಅದೂ ಸರಿಯಾದ ರೀತಿಯಲ್ಲಿ ಅನುಷ್ಠಾನವಾಗಿಲ್ಲ. ಈಗ 38 ತಿಂಗಳ ಅರಿಯರ್ಸ್ ಇನ್ನೂ ಕೊಡಲಾಗಿಲ್ಲ ಎಂದು ನೌಕರರು ಹೇಳುತ್ತಿದ್ದಾರೆ. ಅಲ್ಲದೆ, ಶ್ರೀನಿವಾಸ ಮೂರ್ತಿ ಸಮಿತಿಯ ಶಿಫಾರಸ್ಸುಗಳನ್ನು ಸ್ವೀಕರಿಸಿ ಸರಕಾರ ಅಧಿಕೃತ ಆದೇಶ ಹೊರಡಿಸಬೇಕೆಂಬ ಬೇಡಿಕೆಯೂ ನೌಕರರಿಂದ ಬಂದಿದೆ. ಈ ಸಮಿತಿಯ ಶಿಫಾರಸ್ಸುಗಳಂತೆ ತ್ವರಿತವಾಗಿ ಶೇ.25ರಷ್ಟು ವೇತನ ಹೆಚ್ಚಳ ಮಾಡಿ, ಬಾಕಿ ಹಣ ಬಿಡುಗಡೆ ಮಾಡಬೇಕೆಂಬ ಒತ್ತಾಯ ಉಂಟಾಗಿದೆ. ಈ ಕಾರಣಗಳಿಂದ ನೌಕರರು ಆಗಸ್ಟ್ 5 ರಿಂದ ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. (ಏಜೆನ್ಸೀಸ್)