

ಕೇಂದ್ರ ಸರ್ಕಾರ ಅನುಷ್ಠಾನ ಮಾಡಲು ಮುಂದಾಗಿರುವ ‘ದಿ ಗ್ರೇಟ್ ನಿಕೋಬಾರ್’ ಎಂಬ ಬೃಹತ್ ಯೋಜನೆ ಇದೀಗ ದೇಶಾದ್ಯಂತ ಚರ್ಚಾ ವಸ್ತುವಾಗಿದೆ. ಕಾಂಗ್ರೆಸ್ ನಾಯಕರು ಮತ್ತು ಕೆಲವು ಪರಿಸರಾಸಕ್ತರು ವಿರೋಧ ಮಾಡುತ್ತಿರುವುದೇ ಇದಕ್ಕೆ ಕಾರಣ. ಈ ಯೋಜನೆಯಿಂದ ಭಾರತಕ್ಕೆ ಏನು ಲಾಭ? ಅದನ್ನು ವಿರೋಧ ಪಕ್ಷಗಳು ಏಕೆ ವಿರೋಧಿಸುತ್ತಿವೆ? ಈ ಕುರಿತು ಇಲ್ಲಿದೆ ವಿಸõತ ಮಾಹಿತಿ.
ಕೇಂದ್ರದ ಗ್ರೇಟ್ ನಿಕೋಬಾರ್ ಯೋಜನೆಯನ್ನು ‘ಒಂದು ದುಸ್ಸಾಹಸ’ ಎಂದು ಬಣ್ಣಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇತ್ತೀಚೆಗೆ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರು. ‘ನಿಕೋಬಾರ್ ದ್ವೀಪದಲ್ಲಿ ತಲೆತಲಾಂತರಗಳಿಂದ ನೆಲೆಸಿರುವ ಬುಡಕಟ್ಟು ಜನಸಮುದಾಯದ ಅಸ್ತಿತ್ವಕ್ಕೇ ಈ ಯೋಜನೆ ಕೊಡಲಿಪೆಟ್ಟು ನೀಡಲಿದೆ. ಅಲ್ಲಿರುವ ಜಗತ್ತಿನ ಅಪರೂಪದ ಸಸ್ಯಸಂಕುಲ ಮತ್ತು ಪ್ರಾಣಿಸಂಕುಲವನ್ನೂ ಇದು ವಿನಾಶದ ಅಂಚಿಗೆ ತಳ್ಳುತ್ತದೆ. ದೊಡ್ಡ ಪ್ರಮಾಣದಲ್ಲಿ ಹೊರಗಿನ ಜನರು, ಪ್ರವಾಸಿಗರು ಬರುವುದರಿಂದ ಈ ದ್ವೀಪದ ಮೂಲಸ್ವರೂಪವೇ ಬದಲಾಗಿಬಿಡುತ್ತದೆ’ ಎಂಬುದು ಸೋನಿಯಾ ಅವರ ಆತಂಕ. ಇದೀಗ ಕಾಂಗ್ರೆಸ್ ನಾಯಕರ ಮತ್ತು ಕೆಲವು ಪರಿಸರವಾದಿಗಳ ವಿರೋಧದಿಂದಾಗಿಯೇ ಈ ಯೋಜನೆ ದೇಶಾದ್ಯಂತ ಚರ್ಚೆಯ ವಸ್ತುವಾಗಿದೆ.
ನಿಕೋಬಾರ್ ದ್ವೀಪವು ಅಂಡಮಾನ್ ಮತ್ತು ನಿಕೋಬಾರ್ ಕೇಂದ್ರಾಡಳಿತ ಪ್ರದೇಶದ ಒಂದು ಭಾಗ. 1,841 ಚದರ ಕಿಮೀ ವಿಸ್ತೀರ್ಣ ಹೊಂದಿರುವ ಈ ದ್ವೀಪ, ಶ್ರೀಲಂಕಾದಿಂದ ಸುಮಾರು 1300 ಕಿಮೀ ದೂರದಲ್ಲಿ ಮತ್ತು ಇಂಡೋನೇಷ್ಯಾದ ಸುಮಾತ್ರಾದ ವಾಯವ್ಯ ತುದಿಯಿಂದ 144 ಕಿಮೀ ದೂರದಲ್ಲಿದೆ. ಅಲ್ಲಿ ಸುಮಾರು 80 ಸಾವಿರ ಕೋಟಿ ರೂ.ನಷ್ಟು ಭಾರಿ ವೆಚ್ಚದಲ್ಲಿ ಯೋಜನೆಯೊಂದು ಜಾರಿಯಾಗುತ್ತಿದೆ. ಈ ಯೋಜನೆ ಜಾರಿಯ ಹೊಣೆಯನ್ನು ನೀತಿ ಆಯೋಗ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳ ಸಂಯೋಜಿತ ಅಭಿವೃದ್ಧಿ ನಿಗಮ (ಎಎನ್ಐಐಡಿಸಿಒ) ಹೊತ್ತಿದೆ. ಇದರಡಿ ಅನೇಕ ನಿರ್ಮಾಣ ಕಾಮಗಾರಿಗಳು ಅಲ್ಲಿ ನಡೆಯುತ್ತಿವೆ. ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್ಶಿಪ್ವೆುಂಟ್ ಟರ್ವಿುನಲ್, ಗಲಾಥಿಯಾ ಕೊಲ್ಲಿಯಲ್ಲಿ 16 ದಶಲಕ್ಷ ಟಿಇಯು (ಟ್ವೆಂಟಿಫೂಟ್ ಇಕ್ವಿವ್ಯಾಲೆಂಟ್ ಯೂನಿಟ್) ಸಾಮರ್ಥ್ಯದ ಆಳವಾದ ಬಂದರು ನಿರ್ವಣವಾಗುತ್ತಿದೆ. ಸಾರ್ವಜನಿಕ ಮತ್ತು ರಕ್ಷಣಾ ಬಳಕೆಗಾಗಿ ಗ್ರೀನ್ಫೀಲ್ಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತುತ್ತಿದೆ. 2050ರ ವೇಳೆಗೆ ಅದು ಗಂಟೆಗೆ 4,000 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. 3-4 ಲಕ್ಷ ಜನರಿಗೆ ವಸತಿ, ವಾಣಿಜ್ಯ ಕಟ್ಟಡಗಳನ್ನು ಒಳಗೊಂಡ ಟೌನ್ಶಿಪ್ ನಿರ್ವಣವಾಗುತ್ತಿದೆ. 450 ಮೆಗಾವೋಲ್ಟ್-ಆಂಪಿಯರ್ ವಿದ್ಯುತ್ ಸ್ಥಾವರ, ಗ್ಯಾಸ್ ಮತ್ತು ಸೌರ ಶಕ್ತಿ ಘಟಕ, ರಸ್ತೆಗಳು, ನೀರು ಸರಬರಾಜು, ಮತ್ತು ಇತರ ಮೂಲಸೌಕರ್ಯಗಳು ರೂಪುಗೊಳ್ಳುತ್ತಿವೆ.
ಭಾರತದ ಆಕ್ಟ್ ಈಸ್ಟ್ ಪಾಲಿಸಿ ಮತ್ತು ಸಾಗರ್ (ಎಸ್ಎಜಿಎಆರ್- ಸೆಕ್ಯುರಿಟಿ ಆಂಡ್ ಗ್ರೋತ್ ಫಾರ್ ಆಲ್ ಇನ್ ದಿ ರೀಜನ್) ಸಿದ್ಧಾಂತಕ್ಕೆ ಈ ಯೋಜನೆ ಪೂರಕವಾಗಿದೆ. ಆಸ್ಟ್ರೇಲಿಯಾ, ಅಮೆರಿಕ, ಜಪಾನ್ ಜೊತೆಗೆ ಕ್ವಾಡ್ನ ಭಾಗವಾಗಿರುವ ಭಾರತ ಕಾರ್ಯತಂತ್ರದ ಭಾಗವಾಗಿ ಇಂಡೋ-ಪೆಸಿಫಿಕ್ ಪ್ರದೇಶವನ್ನು ಮುಕ್ತವಾಗಿ ಇರಿಸಿಕೊಳ್ಳಬೇಕಿದೆ.
ಗ್ರೇಟ್ ನಿಕೋಬಾರ್ ದ್ವೀಪ ಭಾರತದ ರಕ್ಷಣಾ ಕಾರ್ಯತಂತ್ರದ ಮತ್ತು ವಾಣಿಜ್ಯ ಗುರಿಗಳ ಒಂದು ಕೇಂದ್ರವಾಗಿದೆ. ಹಿಂದು ಮಹಾಸಾಗರ ಮತ್ತು ಸೂಯೆಜ್ ಕಾಲುವೆಯ ಮೂಲಕ ಪ್ರಮುಖ ವಾಣಿಜ್ಯ ಮಾರ್ಗಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಮಲಕ್ಕಾ ಜಲಸಂಧಿಯ ಸಮೀಪದಲ್ಲಿರುವ ಈ ದ್ವೀಪ, ವಿಶ್ವದ ಅತ್ಯಂತ ಜನನಿಬಿಡ ವಾಣಿಜ್ಯ ಮಾರ್ಗವಾದ ಸಿಕ್ಸ್ ಡಿಗ್ರಿ ಚಾನೆಲ್ನ ಭಾಗವೂ ಆಗಿದೆ. ಜಾಗತಿಕ ವಾಣಿಜ್ಯ ವಹಿವಾಟುಗಳ ಪೈಕಿ ಶೇ. 30-40ರಷ್ಟು ಮತ್ತು ಚೀನಾದ ಶೇ. 60ರಷ್ಟು ಸರಕುಗಳು ಈ ಮಾರ್ಗದ ಮೂಲಕವೇ ಸಾಗುತ್ತವೆ. ಇಲ್ಲಿ ಬಂದರು ನಿರ್ವಿುಸುವುದರಿಂದ ಭಾರತವು ಸಿಂಗಾಪುರ, ಕೊಲಂಬೊ ಮತ್ತು ಪೋರ್ಟ್ ಕ್ಲಾಂಗ್ನಂತಹ ಬಂದರುಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ವಿದೇಶಿ ಬಂದರುಗಳ ಮೇಲೆ ಭಾರತ ಅವಲಂಬನೆ ಆಗುವುದು ಕಡಿಮೆ ಆಗುತ್ತದೆ. ವೆಚ್ಚ ಮತ್ತು ವಿಳಂಬವನ್ನೂ ತಗ್ಗಿಸಬಹುದು.
ಭಾರತದ ಶೇ. 80ರಷ್ಟು ರಫ್ತು ವ್ಯಾಪಾರ ಮತ್ತು ಶೇ. 100ರಷ್ಟು ಇಂಧನ ಆಮದು ಈ ಪ್ರದೇಶದ ಮೂಲಕ ನಡೆಯುತ್ತವೆ. ಜೊತೆಗೆ, ಹಿಂದೂ ಮಹಾಸಾಗರ ಜಾಗತಿಕ ವಾಣಿಜ್ಯ ಮತ್ತು ಸಂಪರ್ಕಕ್ಕೆ ಅತ್ಯಂತ ಪ್ರಭಾವಶಾಲಿ ಸಮುದ್ರ ಮಾರ್ಗ. ದೊಡ್ಡ ಸೇನಾಬಲ ಹೊಂದಿರುವ ವಿಶ್ವದ ಬೃಹತ್ ದೇಶಗಳು ಮತ್ತು ತೀವ್ರವಾಗಿ ಬೆಳೆಯುತ್ತಿರುವ ಆರ್ಥಿಕತೆಗಳ ಕಣ್ಣು ಈ ಪ್ರದೇಶದ ಮೇಲಿದೆ. 21ನೇ ಶತಮಾನದ ಜಾಗತಿಕ ಶಕ್ತಿಕೇಂದ್ರ ಇದು. ‘ಇಲ್ಲಿ ಸಮುದ್ರಾಧಿಪತ್ಯವನ್ನು ಯಾರು ಸಾಧಿಸುವರೋ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಾಬಲ್ಯ ಹೊಂದಿರುತ್ತಾರೆ’ ಎಂದು ಅಮೆರಿಕದ ನೌಕಾಧಿಕಾರಿ ಮತ್ತು ಇತಿಹಾಸಕಾರ ಅಡ್ಮಿರಲ್ ಆಲ್ಪೆ›ಡ್ ಟಿ. ಸುಮಾರು ಒಂದು ಶತಮಾನದ ಹಿಂದೆಯೇ ಹೇಳಿದ್ದರು.
ಈ ದ್ವೀಪದಲ್ಲಿ ಈಗಾಗಲೇ ಭಾರತೀಯ ನೌಕಾಪಡೆಯ ಐಎನ್ಎಸ್ ಬಾಜ್ ವಾಯುನೆಲೆ ಇದೆ. ಈ ಹೊಸ ಯೋಜನೆಯಿಂದ ವಿಮಾನ ನಿಲ್ದಾಣಗಳು, ಜೆಟ್ಟಿಗಳು, ಲಾಜಿಸ್ಟಿಕ್ಸ್ ಮತ್ತು ಶೇಖರಣಾ ಸೌಲಭ್ಯಗಳು, ಯೋಧರಿಗೆ ನೆಲೆ ಮತ್ತು ಕಣ್ಗಾವಲು ಮೂಲಸೌಕರ್ಯ ಇವೆಲ್ಲವೂ ಸುಧಾರಿಸುತ್ತವೆ. ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ತೀಕ್ಷ್ಣವಾದ ಕಣ್ಗಾವಲು ಇಡಲು ಸಾಧ್ಯವಾಗುತ್ತದೆ. ಶತ್ರು ದೇಶಗಳಿಂದ ಅಪಾಯ ಎದುರಾದ ಸಂದರ್ಭದಲ್ಲಿ ತಕ್ಷಣದ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಇದು ಚೀನಾಕ್ಕೆ ಸರಿಯಾದ ಟಕ್ಕರ್ ನೀಡುವ ಯೋಜನೆ ಎಂದು ಸೇನಾ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ ‘ವಿಕಸಿತ ಭಾರತ’ದ ಗುರಿ ಈಡೇರಿಸಿಕೊಳ್ಳುವ ದಿಸೆಯಲ್ಲಿ ನಿರ್ಣಾಯಕವಾಗಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಹೊರಗಿನ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಜೊತೆಗೆ, ಭಾರತವನ್ನು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಮುಖ ಸಮುದ್ರ ಶಕ್ತಿಗಳ ಗುಂಪಿಗೆ ಸೇರಿಸುತ್ತದೆ ಎಂಬುದು ಕೇಂದ್ರ ಸರ್ಕಾರದ ವಾದ.
‘ಈ ಯೋಜನೆಗಾಗಿ 8.5 ಲಕ್ಷ ಮರಗಳನ್ನು ಕಡಿಯಲಾಗುವುದೆಂದು ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವೇ ಹೇಳಿದೆ. ಆದರೆ 32 ಲಕ್ಷದಿಂದ 58 ಲಕ್ಷ ಮರಗಳ ಕಡಿತ ಆಗಬಹುದೆಂದು ಕೆಲವು ಸ್ವತಂತ್ರ ಸಂಸ್ಥೆಗಳು ಹೇಳಿವೆ. ಅಪರೂಪದ ಸಸ್ಯಸಂಪತ್ತು, ಪ್ರಾಣಿಸಂಪತ್ತು, ಕಡಲತೀರದ ಹವಳದ ಬಂಡೆಗಳು, ಆಮೆಗಳಂತಹ ಜಲಚರಗಳು ನಾಶವಾಗುತ್ತವೆ’ ಎನ್ನುತ್ತಾರೆ ಕಾಂಗ್ರೆಸ್ ಸಂಸದ ಮತ್ತು ಮಾಜಿ ಪರಿಸರ ಸಚಿವ ಜೈರಾಮ್ ರಮೇಶ್. ಈ ಯೋಜನೆಯೇ ಫಾರೆಸ್ಟ್ ರೈಟ್ಸ್ ಆಕ್ಟ್ (ಎಫ್ಆರ್ಎ) ಉಲ್ಲಂಘನೆ. 2004ರ ಸುನಾಮಿಯಿಂದ ತೊಂದರೆಗೆ ಒಳಗಾಗಿದ್ದ ಬುಡಕಟ್ಟು ಮತ್ತು ಗಿರಿಜನ ಸಮುದಾಯಗಳ ಜೀವನಶೈಲಿಗೆ ಈ ಯೋಜನೆಯಿಂದ ಮತ್ತಷ್ಟು ಧಕ್ಕೆಯಾಗಲಿದೆ ಎಂಬುದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಭಿಮತ.