ಅಪಘಾತ ತಡೆಗೆ ಫ್ಲೈಓವರ್ ನಿರ್ಮಿಸಿ

bmr
Published on

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ

ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ನಗರ ಭಾಗದಲ್ಲಿ ನಿತ್ಯವೂ ನಡೆಯುವ ಅಪಘಾತಕ್ಕೆ ತಡೆಯೊಡ್ಡುವುದಕ್ಕಾಗಿ ಸರ್ವೀಸ್ ರಸ್ತೆ ಮತ್ತು ಫ್ಲೈಓವರ್ ನಿರ್ಮಿಸುವಂತೆ ಆಗ್ರಹಿಸಿ ಬ್ರಹ್ಮಾವರ ಭಾಗದ ಮೂವತ್ತಮೂರು ಸಂಘಟನೆಗಳ ಬೆಂಬಲದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಬುಧವಾರ ಪ್ರತಿಭಟನೆ ನಡೆಯಿತು.

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, ಬ್ರಹ್ಮಾವರ ಭಾಗದ ಹೆದ್ದಾರಿಯ ಸಮಸ್ಯೆ ಶೀಘ್ರವೇ ನಿವಾರಣೆಗೊಳ್ಳಲಿದ್ದರೆ ಬಿಗು ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಸೇಂಟ್ ಸೀರಿಯನ್ ಚರ್ಚ್ ಧರ್ಮಗುರು ಎಂ.ಸಿ.ಮಥಾಯ್, ಎಸ್.ಎಂ.ಎಸ್ ಕಾಲೇಜು ಪ್ರಾಂಶುಪಾಲ ರಾಬರ್ಟ್ ರಾಡ್ರಿಗಸ್, ಪ್ರರ್ತಕರ್ತ ವಸಂತ ಗಿಳಿಯಾರ್, ಎಸ್‌ಎಂಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಿನ್ಸಿಪಾಲ್ ಅಭಿಲಾಷ ಹಂದೆ ಸಮಸ್ಯೆಯ ಕುರಿತು ಪ್ರಸ್ತಾಪಿಸಿದರು. ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರಿಗೆ ಶಿಕ್ಷಣ ಸಂಸ್ಥೆ ಮತ್ತು ವಿವಿಧ ಸಂಘಟನೆಗಳ ಪರವಾಗಿ ಮನವಿ ಸಲ್ಲಿಸಲಾಯಿತು. ಬ್ರಹ್ಮಾವರ ಪೊಲೀಸ್ ವೃತ್ತನಿರೀಕ್ಷಕ ದಿವಾಕರ್, ಅಮ್ಮುಂಜೆ ಚರ್ಚ್ ಧರ್ಮಗುರು ಡೇವಿಡ್ ಕ್ರಾಸ್ತಾ, ಸಮಾಜಸೇವಕ ಆಲ್ವಿನ್ ಅಂದ್ರಾದೆ ಮೊದಲಾದವರು ಭಾಗವಹಿಸಿದ್ದರು.

ಬ್ರಹ್ಮಾವರ ಬಂದ್ ಎಚ್ಚರಿಕೆ

ಎಸ್‌ಎಂಎಸ್ ಕಾಲೇಜು ಬಳಿಯಿಂದ ತಾಲೂಕು ಅಡಳಿತ ಸೌಧದ ತನಕ ನೂರಾರು ಜನ ಜಾಥಾ ನಡೆಸಿದರು. ಬಳಿಕ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟಿಸಲಾಯಿತು. ಶೀಘ್ರವೇ ಸಮಸ್ಯೆ ಬಗೆಹರಿಯದಿದ್ದರೆ ಬ್ರಹ್ಮಾವರ ಪೂರ್ತಿ ಬಂದ್ ಮಾಡಿ ಉಗ್ರ ಹೋರಾಟ ಆಯೋಜಿಸಲಾಗುವುದು ಎಂದು ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net