ಚಿತ್ರ: ಬಿಟಿಎಸ್ (ಬಿಹೈಂಡ್ ದ ಸೀನ್ಸ್)
ನಿರ್ದೇಶನ: ಕುಲದೀಪ್ ಕಾರಿಯಪ್ಪ, ಅಪೂರ್ವ ಭಾರದ್ವಾಜ್, ಸಾಯಿ ಶ್ರೀನಿಧಿ, ಪ್ರಜ್ವಲ್, ರಾಜೇಶ್ ಶಂಕದ್
ತಾರಾಗಣ: ಜಹಾಂಗೀರ್ ನೀನಾಸಂ, ಮೇದಿನಿ ಕೆಳಮನೆ, ವಿಜಯ್ ಕೃಷ್ಣ, ಕೌಶಿಕ್ ಗೌಡ, ಶ್ರೀಪ್ರಿಯಾ, ಆಮನ್, ಚಂದನಾ, ಮಹಾದೇವ್ ಮುಂತಾದವರು.
| ಹರ್ಷವರ್ಧನ್ ಬ್ಯಾಡನೂರು
ಸಿನಿಮಾ ಬಗ್ಗೆ ಕೇಳಿದರೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಹೇಳುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಸಿನಿಮಾ ನಮಗೆ ಇಷ್ಟವಾದರೂ, ಅದರ ಬಗ್ಗೆ ಕುಟುಂಬದವರು, ಗೆಳೆಯರ ಬಳಿ ಮಾತನಾಡುವಾಗ ಇಷ್ಟವಾಗಲಿಲ್ಲ ಎಂದುಬಿಡುತ್ತೇವೆ. ಅದಕ್ಕೆ ಕಾರಣಗಳು “ಎ’ ಸೆನ್ಸಾರ್ ಪ್ರಮಾಣಪತ್ರದ ಅಂಶಗಳು ಅಂತ ಮತ್ತೆ ಹೇಳಬೇಕಿಲ್ಲ. “ಬಿಟಿಎಸ್’ ನೋಡಿದ ಪ್ರೇಕ್ಷಕರಿಗೆ ಹೀಗನ್ನಿಸದೇ ಇರದು.
ಸಿನಿಮಾ ಒಳಗೊಂದು ಸಿನಿಮಾ ಎನ್ನುವ ಹಾಗೆ ಐವರು ನಿರ್ದೇಶಕರು ಐದು ಕಥೆಗಳಿರುವ ಸಿನಿಮಾ “ಬಿಟಿಎಸ್’. ಸಿನಿಮಾ ಎಂಬ ಮಾಯಾಲೋಕದಲ್ಲಿ ತೆರೆಯ ಹಿಂದೆ ದುಡಿಯುವ, ತೆರೆಯ ಮುಂದೆ ವೀಸುವ, ಅದರಿಂದ ಜೀವನ ಕಟ್ಟಿಕೊಂಡವರ, ಜೀವ ಕಳೆದುಕೊಂಡವರ ಕಥೆಗಳೂ ಇಲ್ಲಿವೆ. ಸಿನಿಮಾಗಳಲ್ಲಿ ಹೀರೋ ಬಿಲ್ಡಪ್ ನೋಡಿ ನಿಜ ಜೀವನದಲ್ಲೂ ಬಿಲ್ಡಪ್ನಲ್ಲಿ ಬದುಕುವ ಅಂಧಾಭಿಮಾನಿಯ ಕುರಿತ “ಬಾನಿಗೊಂದು ಎಲ್ಲೆ ಎಲ್ಲಿದೆ?’, ಕಿರುಚಿತ್ರದಲ್ಲೂ ಬ್ರಹ್ಮಚರ್ಯ, ಲೈಂಗಿಕ ಶೋಷಣೆ, ಧಾರ್ಮಿಕ ಹಗ್ಗಜಗ್ಗಾಟಗಳ ಮೂರು ಕಿರುಕಥೆಗಳಿರುವ “ಕಾಫಿ, ಸಿಗರೇಟ್ಸ್ ಆ್ಯಂಡ್ ಲೈನ್ಸ್’, ಬಾಸ್ನಂತೆ ತಾನೂ ಸ್ಟಾರ್ ಆಗುತ್ತೇನೆ ಎನ್ನುವ ಚಿಂದಿ ಆಯುವ ಯುವಕ “ಹೀರೋ’ ಆಗುವ ಕಥೆ, ತಾನೇ ಸೃಷ್ಟಿಸಿದ ಕಥೆಯ ಪಾತ್ರಗಳ ಜತೆಗೆ ಜಗಳವಾಡುವ ಅಸಿಸ್ಟಂಟ್ ಡೈರೆಕ್ಟರ್ ಕುರಿತ “ಬ್ಲಾಕ್ಬಸ್ಟರ್’ ಮತ್ತು ಹೊಸದಾಗಿ ಮದುವೆಯಾಗುವ ಸಿನಿಮಾ ನಾಯಕನೊಬ್ಬನ ಮೇಕಪ್ ಅಸಿಸ್ಟೆಂಟ್ ಬಗೆಗಿನ “ಸುಮೋಹ’ ಎಂಬ ಐದು ಕಥೆಗಳು ಚಿತ್ರದಲ್ಲಿವೆ. ಹೀಗೆ ಐದು ಕಥೆಗಳೂ ಸಿನಿಮಾ ಹಿನ್ನೆಲೆಯಲ್ಲಿ ಸಾಗಿದರೂ ಬೇರೆ ಬೇರೆ ಆಯಾಮಗಳಲ್ಲಿ ಹೇಳಿರುವುದು ವಿಶೇಷ.
“ಬಿಟಿಎಸ್’ ಒಂದು ಪ್ರಾಯೋಗಿಕ, ಕಾಂಟೆಂಪರರಿ ಸಿನಿಮಾ. ಚಿತ್ರದಲ್ಲಿರುವ ಪಾತ್ರಗಳು ಮತ್ತು ವಿಷಯಗಳು ಹೊರಗಿನಿಂದ ನೋಡಲು ಸರಳವಾಗಿದ್ದರೂ, ಒಳಗೆ ಹೊಕ್ಕಿದರೆ ಆಳ, ಅಗಲ ಅಗಾಧ. ಎರಡೂವರೆ ತಾಸಿನಲ್ಲಿ ಐದು ಕಥೆಗಳಿದ್ದರೂ, ಪ್ರೇಕ್ಷಕರು ಆಯಾ ಕಥೆಯಲ್ಲಿ ಕೆಲ ಕಾಲ ತಲ್ಲೀನರಾಗಲಿ ಎಂಬ ಕಾರಣಕ್ಕಾಗಿ ನಿರ್ದೇಶಕರು ಅಲ್ಲಲ್ಲಿ ಕಥೆಯ ವೇಗಕ್ಕೆ ಬ್ರೇಕ್ ಹಾಕಿದ್ದಾರೆ. ತಾಂತ್ರಿಕವಾಗಿಯೂ “ಬಿಟಿಎಸ್’ ಹಲವೆಡೆ ಗಮನ ಸೆಳೆಯುತ್ತದೆ. ಜಹಾಂಗೀರ್ ನೀನಾಸಂ, ಮೇದಿನಿ ಕೆಳಮನೆ, ವಿಜಯ್ ಕೃಷ್ಣ, ಕೌಶಿಕ್ ಗೌಡ, ಶ್ರೀಪ್ರಿಯಾ, ಆಮನ್, ಚಂದನಾ, ಮಹಾದೇವ್ ಹೀಗೆ ಪ್ರತಿಯೊಬ್ಬ ಪಾತ್ರಧಾರಿಯೂ ತಮ್ಮ ನಟನೆಯ ಮೂಲಕ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.