

ಬೆಂಗಳೂರು: ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ (ಜು.26) ಒಂದು ವರ್ಷ. ಭಾನುವಾರ ಕರೊನಾ ಲಾಕ್ಡೌನ್ ಇರುವ ಕಾರಣ ವರ್ಷೋತ್ಸವ ಸಂಭ್ರಮವನ್ನು ಸೋಮವಾರ ಸರಳವಾಗಿ ಆಚರಿಸಲು ಸರ್ಕಾರ ಸಜ್ಜಾಗಿದೆ.
ವರ್ಷೋತ್ಸವ ಕಾರ್ಯಕ್ರಮ ಒಂದು ಗಂಟೆ ಅವಧಿಯ ಪತ್ರಿಕಾಗೋಷ್ಠಿಗಷ್ಟೇ ಸೀಮಿತವಾಗಿದ್ದು, ಸೋಮವಾರ ಬೆಳಗ್ಗೆ 11ರಿಂದ 12ರವರೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ. ಅಂದು ತಮ್ಮ ಆಡಳಿತದ ಸಾಧನೆಗಳನ್ನು ಮೆಲುಕು ಹಾಕುತ್ತಲೇ ಮುಂದಿನ ಮೂರು ವರ್ಷದ ಗುರಿ, ಆಶಯಗಳ ಕನಸನ್ನು ಸಿಎಂ ಬಿಎಸ್ವೈ ತೆರೆದಿಡಲಿದ್ದಾರೆ. ಕರೊನಾ ಜತೆ ಜತೆಗೆ ನಾವು ಹೆಜ್ಜೆ ಹಾಕಬೇಕಿರುವುದರಿಂದ ಸೋಂಕಿನ ನಿಯಂತ್ರಣ ಹಾಗೂ ರಾಜ್ಯದ ಆರ್ಥಿಕ ಬೆಳವಣಿಗೆ ಕುರಿತು ಮಾತನಾಡಲಿದ್ದಾರೆ. ಅಂದು ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಿಂದಲೇ ಈ ವರ್ಚುವಲ್ ಫ್ಲಾಟ್ ಫಾರಂ ಮುಖೇನ ಲೈವ್ನಲ್ಲಿ ಇರಲಿದ್ದಾರೆ.
ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಿವಿಧ ಇಲಾಖೆಯ ಸಾಧನೆಗಳ ಕುರಿತು ಪ್ರಕಟಿಸಿರುವ 'ಸಮಸ್ಯೆ ಸವಾಲುಗಳ ಒಂದು ವರ್ಷ ಪರಿಹಾರದ ಸ್ಪರ್ಶ, ಧೃತಿಗೆಡದ ಸಿಎಂ ಬಿಎಸ್ವೈ' ಎಂಬ ಪುಸ್ತಕ ಹಾಗೂ 'ಪುಟಕ್ಕಿಟ್ಟ ಚಿನ್ನ' ಎಂಬ ವಿಶಿಷ್ಟ ಕೃತಿ ಬಿಡುಗಡೆಯಾಗಲಿದೆ.
ಬಿಎಸ್ವೈ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 1.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಸಂವಾದ ನಡೆಸಬಹುದೆಂಬ ಮಾಹಿತಿ ಇದೆ. ಅಧಿಕೃತವಾಗಿ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿಲ್ಲ.