

ಬಿಹಾರ: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದು ಇಂದು ಗೊತ್ತಾಗಲಿದೆ. ಆದರೆ ಇಂದು ಜಯಚಂದ್ರ ಅವರೇ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ನಿನ್ನೆಯಿಂದಲೇ ಆಸೆ-ಆತ್ಮವಿಶ್ವಾಸದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಏಕೆಂದರೆ ತುಮಕೂರಿನ ಹೊನ್ನಾದೇವಿ ದೇವಸ್ಥಾನದಲ್ಲಿ ನಿನ್ನೆ ದೇವಿ ಬಲಬದಿಯಿಂದ ಪ್ರಸಾದ ನೀಡಿ ಜಯಚಂದ್ರ ಅವರು ಗೆಲ್ಲುತ್ತಾರೆ ಎಂದು ಪ್ರಸಾದ ಮೂಲಕ ಸಾಂಕೇತಿಕವಾಗಿ ಸೂಚಿಸಿದ್ದಳು. ಅದು ಎಷ್ಟು ನಿಜವಾಗಲಿದೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
ಅದೇ ರೀತಿ ಬಿಹಾರದಲ್ಲೂ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ ಅವರ ಸಹೋದರ ತೇಜ್ ಪ್ರತಾಪ್ ಯಾದವ್. ರಾಘೋಪರ್ ಕ್ಷೇತ್ರದ ಅಭ್ಯರ್ಥಿಯಾಗಿ ಕಣದಲ್ಲಿರುವ ತೇಜಸ್ವಿ ಯಾದವ್, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪುತ್ರ. ನಿನ್ನೆಯಷ್ಟೇ ಸರಳವಾಗಿ ಜನ್ಮದಿನ ಆಚರಿಸಿಕೊಂಡಿರುವ ತೇಜಸ್ವಿ ಯಾದವ್, ಆ ಖುಷಿ ಹೆಚ್ಚಿಸುವಂಥ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂದೆಡೆ ತೇಜಸ್ವಿ ಗೆಲುವಿನ ಬಗ್ಗೆ ಆತ್ಮವಿಶ್ವಾಸದಲ್ಲಿರುವ ಸೋದರ ತೇಜ್ ಪ್ರತಾಪ್, ಮುಖ್ಯಮಂತ್ರಿಯ ಕುರ್ಚಿ ತೇಜಸ್ವಿಗೆ ಬರ್ತ್ಡೇ ಗಿಫ್ಟ್ ಎಂಬುದಾಗಿ ಹೇಳಿದ್ದಾರೆ. ಮಾತ್ರವಲ್ಲ, ಈ ಮೂಲಕ ಅವರು ನಮ್ಮ ಕುಟುಂಬದಿಂದ ಮೂರನೇ ಸಿಎಂ ಆಗಿ ಹೊರಹೊಮ್ಮಲಿದ್ದಾರೆ. ತಂದೆ ಲಾಲೂ ಪ್ರಸಾದ್ ಸಿಎಂ ಆಗಿದ್ದರು, ಅಮ್ಮ ರಾಬ್ಡಿ ದೇವಿ ಸಿಎಂ ಆಗಿದ್ದರು, ಈಗ ತಮ್ಮ ತೇಜಸ್ವಿ ಕೂಡ ಸಿಎಂ ಆಗುತ್ತಾರೆ ಎಂದು ತೇಜ್ ಪ್ರತಾಪ್ ಭಾರಿ ಆತ್ಮವಿಶ್ವಾಸ ತೋರಿದ್ದಾರೆ. (ಏಜೆನ್ಸೀಸ್)