ಈ ಮಹಿಳೆ ಬರೋಬ್ಬರಿ 130 ದಿನ ಕರೊನಾ ವಿರುದ್ಧ ಹೋರಾಡಿದರು...; ಕೋಮಾಕ್ಕೆ ಜಾರಿ ಬದುಕಿ ಬಂದರು

Fatima
Published on

ಕರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ಅತ್ಯಂತ ಸುದೀರ್ಘ ಸಮಯ ತೆಗೆದುಕೊಂಡ ಮಹಿಳೆಯ ಯಾತನೆಯ ಕತೆ ಇದು..

ಇಡೀ ಬ್ರಿಟನ್​​ನಲ್ಲಿ ಕರೊನಾದಿಂದ ಗುಣಮುಖರಾಗಲು ಈ ಮಹಿಳೆಯಷ್ಟು ಸುದೀರ್ಘ ಸಮಯ ತೆಗೆದುಕೊಂಡವರು ಯಾರೂ ಇಲ್ಲ. ಈಕೆಯೊಂದು ದಾಖಲೆ ಸೃಷ್ಟಿಸಿದ್ದರೂ ಅದು ನೋವಿನಿಂದ ಕೂಡಿದ ರೆಕಾರ್ಡ್​ ಆಗಿದೆ

ಫಾತಿಮಾ ಬ್ರೈಡ್ಲ್​ ಎಂಬ 35 ವರ್ಷದ ಮಹಿಳೆ ಬರೋಬ್ಬರಿ 130 ದಿನ( ಸುಮಾರು 4 ತಿಂಗಳು) ಕರೊನಾ ವಿರುದ್ಧ ಸೆಣೆಸಾಡಿದ್ದಾಳೆ. ಅಷ್ಟೂ ದಿನ ಆಸ್ಪತ್ರೆಯಲ್ಲೇ ಇದ್ದ ಇವರು 105ದಿನ ವೆಂಟಿಲೇಟರ್​​ನಲ್ಲಿ ಇದ್ದರು.

ಮಾರ್ಚ್ 6ರಂದು ಮೊರೆಕ್ಕೊದ ಮೊಹಮ್ಮದೀಯಾದಿಂದ ತಮ್ಮ ದೇಶಕ್ಕೆ ವಾಪಸ್ ಬಂದಿದ್ದರು. ಅದಾದ ಮೂರ್ನಾಲ್ಕು ದಿನದಲ್ಲಿ ಫಾತಿಮಾ ಪತಿ ಟ್ರೇಸಿ (56) ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಲು ಪ್ರಾರಂಭಿಸಿದವು. ಫಾತಿಮಾ ತನ್ನ ಪತಿಯನ್ನು ಮಾ.12ರಂದು ಸೌತ್​ಆಂಪ್ಟನ್ನಲ್ಲಿರುವ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅಂದೇ ಫಾತಿಮಾ ಅವರಲ್ಲೂ ಕರೊನಾ ಇರುವುದು ದೃಢಪಟ್ಟಿತ್ತು.

ಮಾರ್ಚ್​ 18ರವರೆಗೂ ಇವರಿಗೆ ಆ್ಯಂಟಿಬಯೋಟಿಕ್​ ನೀಡಲಾಗುತ್ತಿತ್ತು. ಆದರೆ ಫಾತಿಮಾ ಆರೋಗ್ಯ ಮಾತ್ರ ಹದಗೆಡುತ್ತಲೇ ಹೋಗುತ್ತಿತ್ತು. ನಂತರ ಅವರನ್ನು ಐಸಿಯುಗೆ ಸೇರಿಸಲಾಯಿತು. ಅದಾದ ಬಳಿಕ ಅವಳಿಗೆ ನ್ಯೂಮೊನಿಯಾ ಅಟ್ಯಾಕ್​ ಆಗಿ ಕೋಮಾಕ್ಕೆ ಜಾರಿ, 40 ದಿನ ಅದೇ ಸ್ಥಿತಿಯಲ್ಲಿಯೇ ಇದ್ದರು. ಒಂದೆಡೆ ನ್ಯುಮೊನೀಯಾ, ಮತ್ತೊಂದೆಡೆ ಕರೊನಾ ವೈರಸ್​..ಈ ಮಧ್ಯೆ ಬೆಡ್​ನಲ್ಲಿ ಮಲಗಿ ಉಂಟಾದ ಗಾಯ. ಆಕೆಯ ಪರಿಸ್ಥಿತಿ ತುಂಬ ಗಂಭೀರವಾಗಿತ್ತು. ಇದನ್ನೂ ಓದಿ: ಕನ್ಯತ್ವ ಕಳೆದುಕೊಳ್ಳುವುದು ಯುವತಿಯ ಆಯ್ಕೆಯೇ ಹೊರತು ಒತ್ತಡ ಅಲ್ಲ!; ಊರ್ವಶಿ ರೌಟೇಲಾ

ವೈದ್ಯರು ನಿರಂತರ ಚಿಕಿತ್ಸೆ ನೀಡುತ್ತಿದ್ದರು. ಕ್ರಮೇಣ ಅವರ ಉಸಿರಾಟದಲ್ಲಿ ಚೇತರಿಕೆ ಕಂಡುಬಂತು. 40 ಪರ್ಸಂಟ್​ನಿಂದ ಬೇಗಬೇಗ 70 ಪರ್ಸಂಟ್​ನಷ್ಟು ಚೇತರಿಕೆಯಾಯಿತು.  ನಂತರ 105ದಿನ ವೆಂಟಿಲೇಟರ್​ನಲ್ಲಿ ಇಟ್ಟು ಆಕೆಗೆ ಚಿಕಿತ್ಸೆ ನೀಡಲಾಯಿತು. ಇದೀಗ ಮಾತನಾಡುವಷ್ಟು, ವಾಕರ್​ ಮೂಲಕ ನಡೆಯುವಷ್ಟು ಶಕ್ತಿ ಅವರಿಗೆ ಬಂದಿದೆ. ಕರೊನಾ ನೆಗೆಟಿವ್​ ಎಂದು ವರದಿ ಬಂದಿದೆ.

ತನಗೆ ಆರೈಕೆ ಮಾಡಿದ ನರ್ಸ್, ಡಾಕ್ಟರ್​​​​​ಗಳಿಗೆ ಫಾತಿಮಾ ಧನ್ಯವಾದ ಹೇಳಿದ್ದಾರೆ. ನನಗೆ ಹೊಸ ಜೀವನ ಕೊಟ್ಟಿದ್ದೇ ನರ್ಸ್​ಗಳು ಮತ್ತು ವೈದ್ಯರು. ಇದು ಕನಸು ಎಂಬಂತೆ ಭಾಸವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ:  VIDEO ] ಕೋವಿಡ್ ವಿರುದ್ಧ ಜಾಗೃತಿ ಮೂಡಿಸಲು ಈತ ಮಾಡಿದ ಸೃಜನಶೀಲ ತಂತ್ರ ಇದು..

ಫಾತಿಮಾ ಬ್ರೈಡ್ಲ್​ ಅವರ ಕರೊನಾ ಹೋರಾಟ ನೋಡಿದ ಅಲ್ಲಿನ ಆರೋಗ್ಯ ಸಚಿವಾಲಯ ಕೂಡ ಆತಂಕ ವ್ಯಕ್ತಪಡಿಸಿತ್ತು. ಇದೀಗ ಆರೋಗ್ಯ ಕಾರ್ಯದರ್ಶಿ ಮಟ್​ ಹ್ಯಾನ್​ಕಾಕ್​ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಫಾತಿಮಾ ಅವರ ಆರೋಗ್ಯ ಸುಧಾರಿಸಿದ ವಿಷಯ ಕೇಳಿ ಥ್ರಿಲ್​ ಆಗುತ್ತಿದೆ ಎಂದಿದ್ದಾರೆ.

ಇನ್ನು ಫಾತಿಮಾರ ಪತಿ, ಮಾಜಿ ಸೈನಿಕ ಟ್ರೇಸಿಯವರಂತೂ ತುಂಬ ಸಂತೋಷ ವ್ಯಕ್ತಪಡಿಸಿದ್ದಾರೆ. ನನಗೆ ಅವಳನ್ನು ಯಾವತ್ತು ನೋಡುತ್ತೇನೆ ಎಂಬ ಕಾತುರ ಶುರುವಾಗಿತ್ತು. ನನ್ನ ಪತ್ನಿ ವೈದ್ಯಕೀಯ ಪವಾಡಕ್ಕೆ ಸಾಕ್ಷಿಯಾದಳು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net