More

    ಐರೋಪ್ಯ ಒಕ್ಕೂಟದಿಂದ ಕೊನೆಗೂ ಹೊರಬಂದ ಬ್ರಿಟನ್

    ಲಂಡನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಕೊನೆಗೂ ಅಧಿಕೃತವಾಗಿ ಹೊರಬಂದಿದೆ. ಹೊಸ ವರ್ಷದಂದೇ ಈ ಐತಿಹಾಸಿಕ ನಿರ್ಧಾರ ಜಾರಿಗೆ ಬಂದಿದೆ. ಐರೋಪ್ಯ ಒಕ್ಕೂಟದಿಂದ ಹೊರ ಬರುವ ಕುರಿತ ಆರ್ಥಿಕ ಒಪ್ಪಂದಕ್ಕೆ ಬ್ರಿಟನ್ ಪ್ರಧಾನಿ ಬೊರೀಸ್ ಜಾನ್ಸನ್ ಸಹಿ ಹಾಕಿದ್ದಾರೆ. ಈ ಒಪ್ಪಂದಕ್ಕೆ ಬ್ರಿಟನ್ ಸಂಸತ್​ನ ಬಹುತೇಕ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಪ್ರತಿಪಕ್ಷದ ಕೆಲ ಸಂಸದರ ವಿರೋಧ ನಡುವೆ ಈ ಐತಿಹಾಸಿಕ ನಿರ್ಧಾರಕ್ಕೆ ಬ್ರಿಟನ್ ಸಂಸತ್ ಇತ್ತೀಚೆಗೆ ಒಪ್ಪಿಗೆ ನೀಡಿತ್ತು. ಐರೋಪ್ಯ ಒಕ್ಕೂಟದ ಇತರ ರಾಷ್ಟ್ರಗಳು ಕೂಡ ಸುದೀರ್ಘ ಪರಾಮರ್ಶೆ ಬಳಿಕ ಅಂತಿಮ ಒಪ್ಪಂದಕ್ಕೆ ಸಹಮತ ವ್ಯಕ್ತಪಡಿಸಿವೆ.

    4 ವರ್ಷದ ಬಳಿಕ ಜಾರಿ: ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ 2016ರಲ್ಲೇ ನಿರ್ಧಾರ ಮಾಡಿತ್ತು. ಈ ಕುರಿತು ಜನಮತ ಗಣನೆ ನಡೆಸಲಾಗಿತ್ತು. ಸಣ್ಣ ಮತದ ಅಂತರದಲ್ಲಿ ಬ್ರೆಕ್ಸಿಟ್​ಗೆ ಗೆಲುವಾಗಿತ್ತು. 2018ರ ಮಾರ್ಚ್ ಅಂತ್ಯಕ್ಕೆ ಬ್ರೆಕ್ಸಿಟ್ ಜಾರಿಗೆ ತರಲು ಗಡುವು ನಿಗದಿಯಾಗಿತ್ತು. ಆದರೆ ಸಮರ್ಪಕ ಕಾನೂನು ರಚನೆ ಹಾಗೂ ಆರ್ಥಿಕ ನೀತಿ ರಚನೆಯಲ್ಲಿ ಭಿನ್ನಮತ ಎದುರಾದ ಕಾರಣ ಈ ದಿನಾಂಕವನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿತ್ತು. 2020 ಡಿಸೆಂಬರ್ 31ಕ್ಕೆ ಕೊನೆಯ ಗಡುವು ನಿಗದಿ ಮಾಡಲಾಗಿತ್ತು.

    ಬ್ರೆಕ್ಸಿಟ್ ಯಾಕೆ?

    ಐರೋಪ್ಯ ಒಕ್ಕೂಟದ 28 ರಾಷ್ಟ್ರಗಳು ಅಲ್ಲಿನ ಆರ್ಥಿಕತೆ, ಸಾಮಾಜಿಕ ಕ್ಷೇತ್ರದಲ್ಲಿ ಸಮಾನ ಸ್ಥಾನ ಪಡೆದಿವೆ. ಒಕ್ಕೂಟದ ಸದಸ್ಯತ್ವ ಇನ್ನಿತರ ಕಾರಣಕ್ಕೆ ಬ್ರಿಟನ್ ವಾರ್ಷಿಕ ಸಾವಿರಾರು ಕೋಟಿ ಪೌಂಡ್​ಗಳನ್ನು ವೆಚ್ಚ ಮಾಡುತ್ತಿತ್ತು. ಆದರೆ ಇತರ ಸಣ್ಣ ರಾಷ್ಟ್ರಗಳು ಇದರ ಪ್ರಯೋಜನ ಪಡೆಯುತ್ತಿದ್ದವು. ಇದರಿಂದ ಬ್ರಿಟನ್​ಗೆ ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಜತೆಗೆ ಬ್ರಿಟನ್ ಆರ್ಥಿಕ ನೀತಿ, ಆಡಳಿತದ ಮೇಲೂ ಒಕ್ಕೂಟದ ಹಿಡಿತ ಇತ್ತು. ಅದರ ನಿಯಮಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಹೊರಗೆ ಬರಲು ಬ್ರಿಟನ್​ನಲ್ಲಿ ಒತ್ತಾಯ ಆರಂಭವಾಗಿತ್ತ್ತು.

    ಫಲ ನೀಡಿದ ಜಾನ್ಸನ್ ಯತ್ನ

    ಡೇವಿಡ್ ಕೆಮರೂನ್ ಪ್ರಧಾನಿಯಾಗಿದ್ದ ವೇಳೆ ಬ್ರೆಕ್ಸಿಟ್ ಜನಮತ ಗಣನೆ ನಡೆದಿತ್ತು. ಅವರು ಬ್ರೆಕ್ಸಿಟ್ ವಿರುದ್ಧವಾಗಿದ್ದರು. ಆದರೆ ಫಲಿತಾಂಶ ಬ್ರೆಕ್ಸಿಟ್ ಪರವಾಗಿ ಬಂದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಯಿತು. ಬಳಿಕ ಅಧಿಕಾರಕ್ಕೆ ಬಂದ ಥೆರೆಸಾ ಮೇ ಸ್ವಪಕ್ಷೀಯರ ವಿರೋಧ ಎದುರಿಸಬೇಕಾಯಿತು. ಬ್ರೆಕ್ಸಿಟ್​ಗೆ ಸಂಬಂಧಿಸಿದ ಒಪ್ಪಂದದ ಕರಡನ್ನು ಸಂಸತ್​ನಲ್ಲಿ ಅಂಗೀಕರಿಸುವಲ್ಲಿ ಅವರು ಹಲವು ಬಾರಿ ವಿಫಲರಾದರು. ಬಳಿಕ ರಾಜೀನಾಮೆ ನೀಡಿದರು. ನಂತರ ಅಧಿಕಾರಕ್ಕೆ ಬಂದ ಬೋರಿಸ್ ಜಾನ್ಸನ್ ಬ್ರೆಕ್ಸಿಟ್ ಇದನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು.

    ಭಾರತಕ್ಕೆ ಲಾಭವೇನು?

    • ಇನ್ನು ಬ್ರಿಟನ್ ವ್ಯವಹಾರದ ಮೇಲೆ ಐರೋಪ್ಯ ಒಕ್ಕೂಟದ ಹಿಡಿತ ಇರುವುದಿಲ್ಲ. ಹೀಗಾಗಿ ಭಾರತ-ಬ್ರಿಟನ್ ನಡುವೆ ವ್ಯಾಪಾರ, ವಾಣಿಜ್ಯ, ಸಹಕಾರ ಸಂಬಂಧ ಹೆಚ್ಚಳಕ್ಕೆ ಅವಕಾಶ
    • ಬ್ರೆಕ್ಸಿಟ್ ಬಳಿಕ ಬ್ರಿಟನ್ ಕರೆನ್ಸಿ ಫೌಂಡ್ ಮೌಲ್ಯ ಇಳಿಕೆ ಕಾಣುವ ಸಾಧ್ಯತೆ ಇದೆ. ಇದರಿಂದ ಭಾರತದ ಹಲವು ಕಂಪನಿಗಳಿಗೆ ಅನುಕೂಲವಾಗಲಿದೆ. ಜತೆಗೆ ಬ್ರಿಟನ್​ನಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆಯೂ ಇಳಿಕೆಯಾಗುವ ಸಾಧ್ಯತೆ ಇದೆ.
    • ಈಗ ಬ್ರಿಟನ್​ನಲ್ಲಿ ಉದ್ಯಮ ಸಹಿತ ಹಲವು ಸೇವಾ ಕ್ಷೇತ್ರಕ್ಕೆ ಪರಿಣಿತರ ಅಗತ್ಯ ಇದ್ದು, ಭಾರತೀಯರಿಗೆ ಹೆಚ್ಚಿನ ಅವಕಾಶ ಲಭ್ಯವಾಗಲಿದೆ
    • ಬ್ರಿಟನ್​ಗೆ ಈಗ ಹೂಡಿಕೆ ಮಾಡಲು ಸುರಕ್ಷಿತ ಮಿತ್ರ ರಾಷ್ಟ್ರದ ಅಗತ್ಯವಿದೆ. ಭಾರತ ಈ ಸ್ಥಾನ ತುಂಬುವ ಸಾಧ್ಯತೆ ಇದೆ.
    • ಮುಂದಿನ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಜಾನ್ಸನ್ ಮುಖ್ಯ ಅಥಿತಿಯಾಗಿ ಆಗ ಮಿಸಲಿದ್ದಾರೆ. ಈ ಮೂಲಕ ಭಾರತ – ಬ್ರಿಟನ್ ಸಂಬಂಧ ಇನ್ನಷ್ಟು ವೃದ್ಧಿಸುವ ನಿರೀಕ್ಷೆ ಇದೆ.

    ಪ್ರಮುಖ ಘಟನಾವಳಿ

    • 2016 ಜೂನ್ 23 – ಜನಮತ ಗಣನೆಯಲ್ಲಿ ಬ್ರೆಕ್ಸಿಟ್ ನಿರ್ಧಾರಕ್ಕೆ ಗೆಲುವು
    • 2017 ಡಿಸೆಂಬರ್ – ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಹೋಗುವ ಕುರಿತ ನಿಯಮ ಅಂತಿಮ
    • 2018 ಮಾರ್ಚ್ – 2020 ಡಿಸೆಂಬರ್ ವೇಳೆಗೆ ಬ್ರೆಕ್ಸಿಟ್ ಜಾರಿಗೆ ತರಲು ಬ್ರಿಟನ್ ಹಾಗೂ ಐರೋಪ್ಯ ಒಕ್ಕೂಟ ದೇಶಗಳ ಸಹಮತ
    • 2018 ಅಕ್ಟೋಬರ್ – ಬ್ರೆಕ್ಸಿಟ್ ಅಂತಿಮ ಒಪ್ಪಂದ ಯುರೋಪಿಯನ್ ಕೌನ್ಸಿಲ್ ಎದುರು ಮಂಡನೆ
    • 2017 ಮಾರ್ಚ್ – ಬ್ರಿಟನ್ ಪ್ರಧಾನಿ ಥೆರೆಸಾ ಮೇ ನೇತೃತ್ವದಲ್ಲಿ ಬ್ರಿಕ್ಸಿಟ್ ಪ್ರಕ್ರಿಯೆ, ಹಲವು ನಿಯಮಕ್ಕೆ ಸ್ವಪಕ್ಷೀಯರ ವಿರೋಧ
    • 2018 ಅಕ್ಟೋಬರ್ – ಐರೋಪ್ಯ ಒಕ್ಕೂಟ ಹಾಗೂ ಬ್ರಿಟನ್ ನಡುವೆ ವ್ಯಾಪಾರ – ವ್ಯವಹಾರ ಕುರಿತ ಒಪ್ಪಂದ ಬಗ್ಗೆ ಹಲವು ಸುತ್ತಿನ ಮಾತುಕತೆ
    • ಡಿಸೆಂಬರ್ 2020 – ವ್ಯಾಪಾರ ಒಪ್ಪಂದಕ್ಕೆ ಬ್ರಿಟನ್ ಸಂಸತ್ ಅಂತಿಮ ಅನುಮೋದನೆ. ಐರೋಪ್ಯ ಒಕ್ಕೂಟ ಜತೆಗಿನ ಒಪ್ಪಂದಕ್ಕೆ ಬ್ರಿಟನ್ ಪ್ರಧಾನಿ ಜಾನ್ಸನ್ ಸಹಿ. ಯುರೋಪಿಯನ್ ಯೂನಿಯನ್​ನಿಂದ ಅಧಿಕೃತವಾಗಿ ಹೊರ ಬಂದ ಬ್ರಿಟನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts