ಬಿಗ್​ ಬಾಸ್​ ಸೀಸನ್​ 08ಕ್ಕೆ ರಾಜ್​ ತರುಣ್​ ಕಳಿಸಿ! ವಿವಾದದ ಬೆನ್ನಲ್ಲೇ ನಟನಿಗೆ ಫ್ಯಾನ್ಸ್​ಗಳ ಬೆಂಬಲ

ವಿಜಯವಾಣಿ - 2024-08-19T125700.598
Published on

ಹೈದರಾಬಾದ್​: ಕಳೆದ ಒಂದು ತಿಂಗಳಿಂದ ಟಾಲಿವುಡ್​ನಲ್ಲಿ ದೊಡ್ಡ ವಿವಾದವೊಂದು ಹರಿದಾಡುತ್ತಿದ್ದು, ಇದು ತೆಲುಗು ಚಿತ್ರರಂಗದವರಿಗೆ ಬಗೆಹರಿಯದ ತಲೆನೋವಾಗಿ ಪರಿಣಮಿಸಿದೆ. ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ ಬಗೆದಿರುವ ಯುವನಟ ರಾಜ್ ತರುಣ್​, ವಂಚನೆ ಮಾಡಿ, ಸಹ ನಟಿ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ನಟನ ಪ್ರೇಯಸಿ ಲಾವಣ್ಯ ನರಸಿಂಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಇವರಿಬ್ಬರ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್​, ಕ್ಷಣಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದ್ದು, ಅದ್ಯಾಕೋ ನಂಬಿಕೆ ದ್ರೋಹ ಕೇಸ್​ಗೆ ಮುಕ್ತಿ ಸಿಗುವ ಯಾವ ಲಕ್ಷಣಗಳು ಕಂಡುಬಂದಿಲ್ಲ. ಭಾರೀ ವಿವಾದದಿಂದ ತಲೆಮರಿಸಿಕೊಂಡಿರುವ ನಟ ರಾಜ್, ಇದೀಗ ತೆಲುಗು ಬಿಗ್ ಬಾಸ್​ ಸೀಸನ್ ​08ಕ್ಕೆ ಎಂಟ್ರಿ ಕೊಡಲಿದ್ದಾರೆ, ಈಗಾಗಲೇ ದೊಡ್ಡ ಆಫರ್​ ಕೂಡ ಪಡೆದಿದ್ದಾರೆ ಎಂಬ ಸುದ್ದಿಯೊಂದು ಇದೀಗ ವ್ಯಾಪಕವಾಗಿ ಹರಿದಾಡುತ್ತಿದೆ.

ಜಗತ್ತಿನ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಕರೆಯಲ್ಪಡುವ ಬಿಗ್​ ಬಾಸ್​ ಕಾರ್ಯಕ್ರಮ ಹೆಚ್ಚಾಗಿ ವಿವಾದಗಳಿಂದಲೇ ಕೂಡಿರುತ್ತದೆ. ಟಿಆರ್​ಪಿ ರೇಟಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಬಿಗ್​ಬಾಸ್​ ಶೋ, ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ವಿವಾದದಿಂದಲೇ ಸಖತ್ ಟಿಆರ್​ಪಿ ಪಡೆದು, ನೋಡುಗರ ಗಮನಸೆಳೆಯುವ ಈ ಕಾರ್ಯಕ್ರಮವನ್ನು ತೆಲುಗಿನಲ್ಲಿ ನಟ ನಾಗರ್ಜುನ್​ ನಡೆಸಿಕೊಡುತ್ತಾರೆ. ಇದೀಗ ಸೀಸನ್​ 08ರ ಹೊಸ್ತಿಲಲ್ಲಿರುವ ತೆಲುಗು ಬಿಗ್​ಬಾಸ್​ ಕಾರ್ಯಕ್ರಮಕ್ಕೆ ಯಾವ ಸ್ಟಾರ್​ ಸೆಲೆಬ್ರಿಟಿಗಳು ಬರಬಹುದು ಎಂಬ ಊಹೆಗಳು ಎಂದಿನಂತೆ ಈ ಬಾರಿಯೂ ಭಾರೀ ಸದ್ದು ಮಾಡುತ್ತಿವೆ.

ಈ ಸಾಲಿಗೆ ಇದೀಗ ರಾಜ್ ತರುಣ್ ಹೆಸರು ಕೂಡ ಕೇಳಿಬಂದಿದ್ದು, ನಟನ ಅಭಿಮಾನಿಗಳು, ರಾಜ್​ರನ್ನು ಬಿಗ್ ಬಾಸ್​ ಸೀಸನ್ ​08ಕ್ಕೆ ಕರೆತನ್ನಿ, ಕಾರ್ಯಕ್ರಮ ನೋಡಲು ಮತ್ತಷ್ಟು ಚೆನ್ನಾಗಿರುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ. ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ ಮಾಡಿರುವ ಆರೋಪದಡಿ ಕೆಲವು ತಿಂಗಳುಗಳಿಂದ ಭಾರೀ ವಿವಾದಕ್ಕೀಡಾಗಿರುವ ರಾಜ್​, ಈ ಬಾರಿಯ ಬಿಗ್​ಬಾಸ್​ಗೆ ಬಂದ್ರೆ ನೋಡಲು ಮತ್ತಷ್ಟು ಕುತೂಹಲಕರವಾಗಿರುತ್ತದೆ ಎಂದು ಫ್ಯಾನ್ಸ್​ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net