ಸೇತುವೆ ಕನಸಿಗೆ ಮರುಜೀವ!

mathavu
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ದಶಕಗಳ ಬೇಡಿಕೆಯಾಗಿದ್ದ ಮತ್ತಾವುನಲ್ಲಿ ಸೇತುವೆಗಾಗಿ ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್ ವಿಶೇಷ ಮುತ್ತುವರ್ಜಿ ವಹಿಸಿದ್ದು, ಅನುದಾನ ಮಂಜೂರು ಮಾಡಿಸುವ ಮೂಲಕ ಬಹುಮುಖ್ಯ ಸೇತುವೆ ನಿರ್ಮಾಣ ಕನಸಿಗೆ ಜೀವ ತುಂಬಿದ್ದಾರೆ.

ಮತ್ತಾವು ಜನರು ಬಳಸುತ್ತಿದ್ದ ಕೃತಕ ಸೇತುವೆ ಅಪಾಯಕಾರಿಯಾಗಿದ್ದು, ಮಳೆಗಾಲದ ಸಂದರ್ಭ ತುಂಬಿದ ಹೊಳೆಯನ್ನು ದಾಟುವುದು ಇಲ್ಲಿನ ಜನರಿಗೆ ಅನಿವಾರ್ಯವಾಗಿತ್ತು. ಸುಮಾರು ಆರು ತಿಂಗಳು ಜನರಿಗೆ ಹೊಳೆ ದಾಟುವುದೇ ದೊಡ್ಡ ಸಾಹಸ. ಹೆಚ್ಚು ಅಥವಾ ಭಾರದ ಸರಕುಗಳನ್ನು ಸುತ್ತುಬಳಸಿ ಮತ್ತಾವಿಗೆ ತರಬೇಕಿದ್ದು, ತುರ್ತು ಸಂದರ್ಭ ಸ್ಥಳೀಯರಿಗೆ ಕಷ್ಟವಾಗುತ್ತಿತ್ತು. ಹಳೇ ಕೃತಕ ಸೇತುವೆಯ ಕಾರಣದಿಂದ ಮಕ್ಕಳು ಶಾಲೆಗೆ ತೆರಳಲು ಹಿಂಜರಿಯುತ್ತಿದ್ದರು.

ಪ್ರಸ್ತುತ ಶಾಸಕರ ಕಾರ್ಯದಿಂದ ಗ್ರಾಮಸ್ಥರಲ್ಲಿದ್ದ ಸೇತುವೆ ನಿರ್ಮಾಣ ಕಾರ್ಯಕ್ಕೆ ಮತ್ತೆ ಜೀವಬಂದಿದ್ದು, ಶೀಘ್ರವೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಮತ್ತಾವು ಗ್ರಾಮಸ್ಥರು ಶಾಸಕ ವಿ.ಸುನೀಲ್‌ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ಸತತ ವರದಿ

ಮತ್ತಾವು ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಸೇತುವೆ ನಿರ್ಮಾಣಕ್ಕಾಗಿ ದಶಕಗಳಿಂದ ಹೋರಾಡುತ್ತಲೇ ಇದ್ದು, ಬೇಡಿಕೆ ಮಾತ್ರ ನನೆಗುದಿಗೆ ಬಿದ್ದಂತಾಗಿತ್ತು. ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ವಿಜಯವಾಣಿ ಬೆಂಬಲ ನೀಡಿದ್ದು, ಸೇತುವೆ ನಿರ್ಮಾಣದ ಅಗತ್ಯ, ಗ್ರಾಮಸ್ಥರಿಗೆ ಆಗುವ ತೊಂದರೆಗಳ ಕುರಿತು ಸತತ ವರದಿ ಪ್ರಕಟಿಸಿತ್ತು.

ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಾವು ಪ್ರದೇಶದ ಅರಣ್ಯದಂಚಿನ ಮಲೆಕುಡಿಯ ಸಮುದಾಯದ ನಿವಾಸಿಗಳ ಕಾಲನಿ ಸಂಪರ್ಕಕ್ಕೆ ಸೇತುವೆಯ ನಿರ್ಮಿಸಲು 2ಕೋಟಿ ರೂ. ಅನುದಾನ ಮಂಜೂರಾಗಿದೆ. ಟೆಂಡರ್ ಮುಗಿದ ತಕ್ಷಣ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಈ ಮೊದಲು ಅನುದಾನ ಮಂಜೂರಾಗಿದ್ದರೂ ಕಾರಣಾಂತರಗಳಿಂದ ಸೇತುವೆ ನಿರ್ಮಾಣ ಆರಂಭವಾಗಿರಲಿಲ್ಲ. ಈ ಬಾರಿ ಮತ್ತೊಮ್ಮೆ ಪ್ರಯತ್ನಿಸಿ ಅನುದಾನ ಮಂಜೂರುಗೊಳಿಸಲಾಗಿದೆ. ಸುನೀಲ್‌ಕುಮಾರ್ ಶಾಸಕ 5 ದಶಕಗಳ ಬೇಡಿಕೆಯಾಗಿದ್ದು, ಮಲೆಕುಡಿಯ ಸಂಘದ ನಿರಂತರ ಹಕ್ಕೋತ್ತಾಯಕ್ಕೆ ಸಂದ ಜಯ. ಕಾಮಗಾರಿ ನಿಗಧಿತ ಅವಧಿಯಲ್ಲಿ ಪ್ರಾರಂಭ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಗಂಗಾಧರ, ಅಧ್ಯಕ್ಷರು ಜಿಲ್ಲಾ ಮಲೆಕುಡಿಯ ಸಂಘ ಉಡುಪಿ

ಪಾಯಿಂಟ್ಸ್

*ಸೇತುವೆ ನಿರ್ಮಾಣಕ್ಕೆ 2 ಕೋಟಿ ರೂ.ಅನುದಾನ ಮಂಜೂರು.*2ನೇ ಪ್ರಯತ್ನದಲ್ಲಿ ಯಶಸ್ವಿ.*ಟೆಂಡರ್ ಮುಗಿದ ಕೂಡಲೇ ಕಾರ್ಯಾರಂಭ.*ದಶಕಗಳಿಂದ ಮತ್ತಾವು ಗ್ರಾಮಸ್ಥರ ಬೇಡಿಕೆ.*ಅಪಾಯಕಾರಿ ಕೃತಿಕ ಸೇತುವೆ ಮೇಲೆ ಜನರ ಸಂಚಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net