ಕನ್ನಡಕವಿಲ್ಲದೆ ನ್ಯೂಸ್​ ಪೇಪರ್ ಓದಲು ವಿಫಲನಾದ ವರ; ಮದುವೆ ಕ್ಯಾನ್ಸಲ್ ಮಾಡಿದ ವಧು!

aaaa
Published on

ಲಖನೌ: ಎಂತೆದ್ದದ್ದೋ ಕಾರಣಕ್ಕೆ ಮದುವೆಗಳು ಕ್ಯಾನ್ಸಲ್ ಆಗುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ಕಡೆ ವರನಿಗೆ ಕನ್ನಡಕವಿಲ್ಲದೆ ನ್ಯೂಸ್ ಪೇಪರ್ ಓದಲು ಬರುವುದಿಲ್ಲವೆಂದೇ ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಸದರ್​ ಕೊಟ್ವಾಲಿ ಪ್ರದೇಶದ ಜಮಾಲ್ಪುರ್ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಗ್ರಾಮದ ನಿವಾಸಿ ಅರ್ಜುನ್ ಸಿಂಗ್​ ಅವರ ಮಗಳು ಅರ್ಚನಾಳಿಗೆ ಬನ್ಶಿ ಗ್ರಾಮದ ನಿವಾಸಿ ಶಿವಂನೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು. ಜೂನ್ 20ರಂದು ಮದುವೆ ಮುಹೂರ್ತ ಗೊತ್ತು ಮಾಡಲಾಗಿತ್ತು. ಅದಕ್ಕೂ ಮೊದಲೇ ಶಾಸ್ತ್ರವಾಗಿ ವರನಿಗೆ ವಧುವಿನ ಕುಟುಂಬ ಮೋಟಾರ್ ಸೈಕಲ್​ ಅನ್ನೂ ಉಡುಗೊರೆ ಕೊಟ್ಟಿತ್ತು.

ಮದುವೆಗೆ ಮೊದಲು ಶಿವಂ ಕನ್ನಡಕ ಹಾಕಿದ್ದನ್ನು ನೋಡಿರದ ವಧುವಿನ ಕುಟುಂಬಕ್ಕೆ ಮದುವೆಯ ದಿನ ಆತ ಕನ್ನಡಕ ಹಾಕಿಕೊಂಡಿದ್ದನ್ನು ನೋಡಿ ಅನುಮಾನ ಶುರುವಾಗಿದೆ. ವರನಿಗೆ ಕಣ್ಣಿನಲ್ಲಿ ತೊಂದರೆಯಿರಬಹುದು ಎಂದು ಅನುಮಾನ ಬಂದು, ಆತನನ್ನು ಕರೆದು ಹಿಂದಿ ದಿನಪತ್ರಿಕೆಯನ್ನು ಕನ್ನಡಕ ಹಾಕಿಕೊಳ್ಳದೆಯೇ ಓದುವಂತೆ ಹೇಳಿದ್ದಾರೆ. ಆದರೆ ಆತ ಪೇಪರ್ ಓದುವಲ್ಲಿ ವಿಫಲನಾಗಿದ್ದಾನೆ. ಕನ್ನಡಕ ಹಾಕದಿದ್ದರೆ ಆತನ ದೃಷ್ಟಿ ಸರಿಯಿಲ್ಲ ಎನ್ನುವ ವಿಚಾರ ವಧುವಿನ ಕುಟುಂಬಕ್ಕೆ ಆಗ ಗೊತ್ತಾಗಿದೆ.

ವಿಚಾರ ತಿಳಿಯುತ್ತಿದ್ದಂತೆ ವಧು ಈ ಮದುವೆ ಆಗಲು ಸಾಧ್ಯವಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾಳೆ. ಆಕೆಯ ಮಾತಿಗೆ ಒಪ್ಪಿದ ಆಕೆಯ ಕುಟುಂಬ ಮದುವೆ ಕ್ಯಾನ್ಸಲ್ ಮಾಡಿದೆ. ಅದಾದ ನಂತರ ತಾವು ಕೊಟ್ಟಿದ್ದ ಬೈಕ್ ಹಾಗೂ ಮದುವೆಗೆ ಖರ್ಚು ಮಾಡಿದ್ದ ಹಣವನ್ನು ವಾಪಸು ಕೊಡಬೇಕೆಂದು ಕೇಳಿದೆ. ಅದಕ್ಕೆ ವರನ ಕುಟುಂಬ ಒಪ್ಪದ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net