

ಬೆಂಗಳೂರು: ಸರ್ಕಾರಿ ಅಧಿಕಾರಿಗಳ ವರ್ಗಾವಣೆ, ಮದ್ಯದಂಗಡಿ ಲೈಸೆನ್ಸ್ ನವೀಕರಣ, ಗುತ್ತಿಗೆದಾರರ ಬಿಲ್ ಪಾವತಿ ಹೀಗೆ ಲಂಚ, ಕಮಿಷನ್ ಹೊಡೆಯುವ ಯಾವ ಮಾರ್ಗವನ್ನೂ ಬಿಡದೆ ಎಗ್ಗಿಲ್ಲದೆ ಲೂಟಿ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಪೌರ ಕಾರ್ಮಿಕರ ಖಾಯಮಾತಿಗೂ 3-5 ಲಕ್ಷ ರೂ. ಲಂಚ ಪಡೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ವಿಪಕ್ಷ ನಾಯಕ ಆರ್. ಅಶೋಕ ಟ್ವೀಟ್ (ಪ್ರಸ್ತುತ ಎಕ್ಸ್) ಮೂಲಕ ಕಿಡಿಕಾರಿದ್ದಾರೆ.
"ಪಾಪ ಬಡ ಪೌರ ಕಾರ್ಮಿಕರು ಕೆಲಸ ಖಾಯಂ ಮಾಡಿಕೊಳ್ಳುವ ಆಸೆಯಿಂದ ಕತ್ತಲ್ಲಿರುವ ತಾಳಿ ಅಡವಿಟ್ಟು, ವಡವೆ ಮಾರಿ ದುಡ್ಡು ತರುತ್ತಿದ್ದಾರೆ ಎಂದು ತಮ್ಮದೇ ಪಕ್ಷದ ಶಾಸಕ ಕೆ.ಎಸ್.ಬಸವಂತಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಆಗಿದೆ ಎಂದು ಇತ್ತೀಚೆಗಷ್ಟೇ ತಮ್ಮ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಹೇಳಿದ್ದನ್ನ ಈಗ ಮತ್ತೊಬ್ಬ ಶಾಸಕರು ಸಾಬೀತು ಮಾಡಿದ್ದಾರೆ" ಎಂದರು.
"ನಿಮ್ಮದು ಭ್ರಷ್ಟರಿಂದ ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರವೇ ಇರುವ ಸರ್ಕಾರ ಎಂಬುದನ್ನು ಸಾಬೀತುಪಡಿಸಲು ಇನ್ನೇನೂ ಉಳಿದಿಲ್ಲ. ನಿಮ್ಮ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಈ ಕೊಡಲೇ ರಾಜೀನಾಮೆ ಕೊಟ್ಟು ಕನ್ನಡಿಗರಿಗೆ ಈ ಭ್ರಷ್ಟ ಸರ್ಕಾರದಿಂದ ಮುಕ್ತಿ ಕೊಡಿ" ಎಂದು ಟ್ವೀಟ್ನಲ್ಲಿ ಸಮರ ಸಾರಿದ್ದಾರೆ.