ಮಾಸ್ಕ್ ಹಾಕ್ಕೊಳ್ಳಿ ಅಂತ ಡಾಕ್ಟರ್ ಹೇಳಿದ್ದಕ್ಕೆ ಆಂಬ್ಯುಲೆನ್ಸ್‌ನ ಗಾಜುಗಳನ್ನೇ ಒಡೆದು ಹಾಕಬೇಕೆ?

glass may
Published on

ಬೆಂಗಳೂರು: ಆಸ್ಪತ್ರೆಯ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ತಿಳಿ ಹೇಳಿದ ವೈದ್ಯರು ಮತ್ತು ನರ್ಸ್‌ಗೆ ರೌಡಿ ಗ್ಯಾಂಗ್ ನಿಂದಿಸಿ ಆಂಬುಲೆನ್ಸ್ ಗಾಜು ಒಡೆದು ದಾಂಧಲೆ ನಡೆಸಿದೆ.

ಎಲೆಕ್ಟ್ರಾನಿಕ್ಸ್ ಸಿಟಿಯ ಬ್ಲಾಸಂ ಆಸ್ಪತ್ರೆ ಆಸ್ಪತ್ರೆ ನಿರ್ದೇಶಕ ಮಂಜುನಾಥ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ರೌಡಿ ಮಧು, ಗೌತಮ್ ಮತ್ತವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆ ಬೀಸಿರುವುದಾಗಿ ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.

ಮಧು ಸ್ನೇಹಿತ ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆಗಾಗಿ ಬ್ಲಾಸಂ ಆಸ್ಪತ್ರೆಗೆ ದಾಖಲಾಗಿದ್ದ. ಮೇ 6ರ ಮಧ್ಯಾಹ್ನ 3.30ರಲ್ಲಿ ಸ್ನೇಹಿತನ ಆರೋಗ್ಯ ವಿಚಾರಿಸಲು ಮಧು ಮತ್ತು ಆತನ ಸಹಚರರು ಆಸ್ಪತ್ರೆಗೆ ಹೋಗಿದ್ದರು.

ಆಗ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಅಷ್ಟಕ್ಕೆ ಕುಪಿತಗೊಂಡ ಮಧು, ‘ನನಗೆ ಬುದ್ದಿವಾದ ಹೇಳಲು ಬರುತ್ತೀರಾ. ನಾನು ಯಾರು ಗೊತ್ತಾ’ ಎಂದು ಜೋರಾಗಿ ಕೂಗಾಡಿದ್ದಾನೆ.

ವೈದ್ಯರು ಬಂದು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಂಬುಲೆನ್ಸ್ ಗಾಜು ಒಡೆದು ದಾಂಧಲೆ ನಡೆಸಿದ್ದಾನೆ. ಈತನ ಜತೆ ಹಲವು ಮಂದಿ ಇದ್ದರು ಎಂದು ದೂರಿನಲ್ಲಿ ಮಂಜುನಾಥ್ ಉಲ್ಲೇಖಿಸಿದ್ದಾರೆ.

ಆಸ್ಪತ್ರೆಯ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ಸುಳಿವು ಲಭ್ಯವಾಗಿದೆ. ಶೀಘ್ರದಲ್ಲಿಯೇ ಬಂಧಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net