ಆಕ್ಸ್​ಫರ್ಡ್​-ಅಸ್ಟ್ರಾಜೆನೆಕಾ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ವೇಳೆ ಸ್ವಯಂ ಸೇವಕ ಸಾವು

Vaccine
Published on

ಬ್ರಾಸಿಲಿಯಾ: ಬ್ರಿಟನ್​ನ ಆಕ್ಸ್​ಫರ್ಡ್​ ಯೂನಿವರ್ಸಿಟಿ ಮತ್ತು ಅಸ್ಟ್ರಾಜೆನೆಕಾ ಕಂಪನಿ ಸೇರಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ಕ್ಲಿನಿಕಲ್​​ ಟ್ರಯಲ್​ ವೇಳೆ ಬ್ರೆಜಿಲ್​ ಮೂಲದ ಸ್ವಯಂಸೇವಕ ಸಾವಿಗೀಡಾಗಿರುವುದಾಗಿ ಬ್ರೆಜಿಲಿಯನ್​ ಆರೋಗ್ಯಾಧಿಕಾರಿ ಅನ್ವಿಸಾ ತಿಳಿಸಿದ್ದು, ಇದರ ಹೊರತಾಗಿಯೂ ಟ್ರಯಲ್​ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಪರೀಕ್ಷೆ ಮುಂದುವರಿಸುವುದಾಗಿ ಆಕ್ಸ್​ಫರ್ಡ್​ ಖಚಿತ ಪಡಿಸಿದೆ. ಎಚ್ಚರಿಕೆಯ ಮೌಲ್ಯಮಾಪನ ಬಳಿಕ ಕ್ಲಿನಿಕಲ್​​​ ಟ್ರಯಲ್​ನ ಸುರಕ್ಷತೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಆಕ್ಸ್​ಫರ್ಡ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಸಾವಿನ ಸುದ್ದಿ ತಿಳಿದ ಬೆನ್ನಲ್ಲೇ ಅಸ್ಟ್ರಾಜೆನೆಕಾ ಕಂಪನಿ ತಕ್ಷಣ ಪ್ರತಿಕ್ರಿಯಿಸಲು ನಿರಾಕರಿಸಿದೆ.

ಮಹಾಮಾರಿ ಕರೊನಾಗೆ ಲಸಿಕೆ ಕಂಡುಹಿಡಿಯುವಲ್ಲಿ ಆಕ್ಸ್​ಫರ್ಡ್​ ಮತ್ತು ಅಸ್ಟ್ರಾಜೆನೆಕಾ ಕಂಪನಿ ಮುಂಚೂಣಿಯಲ್ಲಿವೆ. ಭಾರತದ ಜತೆಗೆ ಇಡೀ ವಿಶ್ವವೇ ಈ ಲಸಿಕೆ ಮೇಲೆ ಭಾರಿ ಭರವಸೆಯನ್ನು ಹೊಂದಿವೆ. ಇಡೀ ಜಗತ್ತು ಸಹ ಕರೊನಾ ಲಸಿಕೆಯನ್ನು ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ ಕ್ಲಿನಿಕಲ್​ ಟ್ರಯಲ್​ನಲ್ಲಿ ಸ್ವಯಂ ಸೇವಕನ ಸಾವಿನ ವಿಚಾರ ಆಘಾತವೇ ಸರಿ.

ಇನ್ನು ಕರೊನಾ ಲಸಿಕೆಯಿಂದ ಸ್ವಯಂ ಸೇವಕ ಮೃತಪಟ್ಟರೆ ಅಂತಹ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ಅನ್ನು ಅಮಾನತ್ತಿನಲ್ಲಿ ಇಡಲಾಗುತ್ತದೆ. ಆದರೆ, ವ್ಯಕ್ತಿಗೆ ಮೆನಿಂಜೈಟಿಸ್ (ಮೆದುಳು ಉರಿಯೂತ) ಕಾಯಿಲೆಗಾಗಿ ಔಷಧಿ ನೀಡಲಾಗಿತ್ತು ಎಂದು ವರದಿಯಾಗಿದೆ.

ಇಷ್ಟೆಲ್ಲಾ ಗೊಂದಲಗಳ ನಡುವೆ ಬ್ರಜಿಲ್​ನ ಸ್ವತಂತ್ರ ಪರಿಶೀಲನಾ ಸಮಿತಿ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ಮುಂದುವರಿಸಲು ಶಿಫಾರಸು ಮಾಡಿದೆ ಎಂದು ಸಾವೋಪೋಲೋ ಫೆಡರಲ್​ ಯೂನಿವರ್ಸಿಟಿ ತಿಳಿಸಿದೆ. ಅಲ್ಲದೆ, ಇದೇ ಯೂನಿವರ್ಸಿಟಿಯು ಸಹ ಟ್ರಯಲ್​ಗೆ ನೆರವು ನೀಡುತ್ತಿದೆ. ಬ್ರೆಜಿಲ್​ ಸ್ವಯಂ ಸೇವಕ ಎಂಬುದನ್ನು ಖಚಿತಪಡಿಸಿದ್ದು ಸಹ ಇದೇ ಯೂನಿವರ್ಸಿಟಿ, ಆದರೆ, ಹೆಚ್ಚಿನ ಮಾಹಿತಿಯನ್ನು ಒದಗಿಸಿಲ್ಲ.

ಇನ್ನು ಲಸಿಕೆ ಬಗ್ಗೆ ಮಾಹಿತಿ ನೀಡಿರುವ ಬ್ರಜಿಲಿಯನ್​ ಯೂನಿವರ್ಸಿಟಿ ವಕ್ತಾರ, ಟ್ರಯಲ್​ನಲ್ಲಿ ಒಳಗೊಂಡಿರುವ 8 ಸಾವಿರ ಮಂದಿ ಸೇರಿದಂತೆ ಒಟ್ಟು 10 ಸಾವಿರ ಸ್ವಯಂ ಸೇವಕರಿಗೆ ಬ್ರೆಜಿಲ್​ನ 6 ನಗರಗಳಲ್ಲಿ ಮೊದಲ ಹಂತದ ಲಸಿಕೆ ನೀಡಲಾಗಿದೆ ಮತ್ತು ಅನೇಕರಿಗೆ ಈಗಾಗಲೇ ಎರಡನೇ ಹಂತದ ಲಸಿಕೆಯನ್ನು ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net