ಶುದ್ಧಭಕ್ತಿಗೆ ಒಲಿಯುವಳು ವರಮಹಾಲಕ್ಷ್ಮೀ: ಬ್ರಹ್ಮಾಂಡ ಗುರೂಜಿ ಸಂವಾದ

ವರಮಹಾಲಕ್ಷ್ಮೀ ಪೂಜೆ ನಿಯಮಬದ್ಧವಾಗಿ ಮಾಡುವುದು ಹೇಗೆ? Brahmanda Guruji Varamahalakshmi - youtube
Published on

ಮಹಿಳೆಯರೂ ಸೇರಿ ಕುಟುಂಬದವರೆಲ್ಲರೂ ಭಕ್ತಿಯಿಂದ ಆಚರಿಸುವ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ, ವಿಶೇಷತೆ ಜತೆಗೆ ಕಾಲಾಂತರದಲ್ಲಿ ಅನೇಕ ದೋಷಗಳ ಕುರಿತು ‘ಬ್ರಹ್ಮಾಂಡ ಗುರೂಜಿ’ ಎಂದೇ ಖ್ಯಾತರಾದ ಶ್ರೀ ನರೇಂದ್ರ ಬಾಬು ಶರ್ಮಾ ಸ್ಪಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು. ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 247 ನ್ಯೂಸ್’ ಗುರುವಾರ ಆಯೋಜಿಸಿದ್ದ ಕ್ಲಬ್​ಹೌಸ್ ಸಂವಾದದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.

ವ್ರತ ಹಾಗೂ ಪೂಜೆ ಬೇರೆ

ಅನೇಕರು ಹೊಸದಾಗಿ ವ್ರತವನ್ನು ಆರಂಭಿಸುತ್ತೇವೆ ಎನ್ನುತ್ತಾರೆ. ಆದರೆ ಮುಖ್ಯವಾಗಿ ನಾವು ತಿಳಿಯಬೇಕಿರುವುದು, ವ್ರತ ಹಾಗೂ ಪೂಜೆಯ ವ್ಯತ್ಯಾಸ. ಇರುವ ಪೂಜೆಗಳನ್ನು ಬಿಡಬಾರದು, ಹೊಸದಾಗಿ ಪೂಜೆಯನ್ನು ಮಾಡುವುದು ಬೇಡ ಎಂಬ ಮಾತಿದೆ. ವ್ರತಗಳನ್ನು ಆಚರಿಸುವವರು ಹಿನ್ನೆಲೆಯಿದೆಯೇ ನೋಡಬೇಕು. ತಾಯಿ ಮನೆ ಕಡೆ ಅಥವಾ ಗಂಡನ ಮನೆಗಳಲ್ಲಿ ಆಚರಿಸುವ ಸಂಪ್ರದಾಯ ಇದ್ದರೆ ಕಲಶ ಸ್ಥಾಪನೆ ಮಾಡಿ ವ್ರತಾಚರಣೆ ಮಾಡಬಹುದು. ಹೊಸದಾಗಿ ಆರಂಭಿಸಬೇಕು ಎನ್ನುವವರು ಪೂಜೆ ಮಾಡಬಹುದು. ವರಮಹಾಲಕ್ಷ್ಮೀಯ ಭಾವಚಿತ್ರವನ್ನಿರಿಸಿ ಪೂಜೆ ಮಾಡಿ ನೈವೇದ್ಯ ಅರ್ಪಿಸಿಸುವುದು ಉತ್ತಮ.

ವೈಭವಯುತ ಎನ್ನುವುದು ತಪ್ಪು

ಪಕ್ಕದ ಮನೆಯವರು ಮಾಡುತ್ತಾರೆ, ಅವರಿಗಿಂತ ವೈಭವವಾಗಿ ಪೂಜೆ ಮಾಡಬೇಕು ಎಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವ ಅಭ್ಯಾಸವನ್ನು ಕೆಲವರು ಮಾಡಿಕೊಂಡಿದ್ದಾರೆ. ಅದು ತಪು್ಪ. ‘ಶ್ರದ್ಧಾಂ ವಿದ್ಯಾ ಆಯುಷ್ಯ ವರ್ಣಂ’ ಎಂಬ ಮಾತಿದೆ. ಸ್ತ್ರೀಗೆ ಅವಮಾನ ಮಾಡಿದರೆ ಲಕ್ಷ್ಮೀ ಮನೆ ಬಿಟ್ಟು ಹೋಗುತ್ತಾಳೆ. ಒಮ್ಮೆ ಒಲಿದರೆ ಅಲ್ಲೆ ಇರುತ್ತಾಳೆ. ಶ್ರದ್ಧೆಯಿಂದ ಪೂಜೆ ಮಾಡಬೇಕೆ ವಿನಃ ಬೇರೆಯವರ ಎದುರು ತೋರಿಕೆಗೆ, ಸ್ಪರ್ಧೆಗೆ ಬಿದ್ದು ವ್ರತ ಆಚರಣೆ ಮಾಡಿ ಎಂದು ಎಲ್ಲೂ ಹೇಳಿಲ್ಲ.

ಪರಮಾತ್ಮನ ಅನುಗ್ರಹ ಪಡೆಯಿರಿ

ಸ್ಕಂದ ಪುರಾಣದಲ್ಲಿ, ಮಾರ್ಕಂಡೇಯ ಪುರಾಣಗಳಲ್ಲಿ ವರ ಮಹಾಲಕ್ಷ್ಮೀ ಕಥೆ ಬರುತ್ತದೆ. ಸಮುದ್ರಮಥನ ಮಾಡಿದಾಗ ಭೂಮಿಗೆ ಮಹಾಲಕ್ಷ್ಮೀ ಬರುತ್ತಾಳೆ. ಪರಮಾತ್ಮನ ಅನುಗ್ರಹ ಪಡೆಯುವ ಅವಕಾಶ ಇದು. 12ರಲ್ಲಿ ನಾಲ್ಕು ಮಾಸ ಶ್ರೇಷ್ಠ. ಸಾವನ್ ಕಾ ಮಹೀನಾ ಎಂದು ಉತ್ತರ ಭಾರತದಲ್ಲಿ ಈ ಸಮಯದಲ್ಲಿ ಯಾತ್ರೆಗಳನ್ನು ಮಾಡುತ್ತಾರೆ. ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ ಮಾಸಗಳಲ್ಲಿ ಕ್ರಮವಾಗಿ ಪರಮೇಶ್ವರ, ಗಣಪತಿ ಹಾಗೂ ಜಗನ್ಮಾತೆ ಬರುತ್ತಾಳೆ.

ವ್ರತ ಎಷ್ಟು ವರ್ಷ ಮಾಡಬೇಕು?

ಮನೆಯ ಸಂಪ್ರದಾಯದಲ್ಲಿ ವ್ರತಾಚರಣೆ ಬಂದಿದ್ದರೆ, ವ್ರತ ಮಾಡುವವರು ಸರಿಯಾಗಿ 9 ಅಥವಾ 18 ವರ್ಷ ಮಾಡಿಕೊಳ್ಳಬೇಕು. ಆದರೆ ಅನೇಕರಿಗೆ ಹೀಗೆ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಶೃಂಗೇರಿ, ತಮಿಳುನಾಡು, ಆಂಧ್ರಪ್ರದೇಶ, ಮಲೆನಾಡು ಸೇರಿ ಕೆಲವೆಡೆ ಮಾತ್ರ ಭಕ್ತಿಯಿಂದ ಆಚರಿಸಿಕೊಂಡುಬರುತ್ತಿದ್ದಾರೆ. ಆರ್ಥಿಕ ಕಾರಣ ಸೇರಿ ಅನೇಕ ಪರಿಸ್ಥಿತಿಗಳಲ್ಲಿ ಕೆಲವರಿಗೆ ಅನುಕೂಲ ಆಗುವುದಿಲ್ಲ. ಅದೇ ಪೂಜೆ ಎಂದಿಟ್ಟುಕೊಳ್ಳಿ. ಅದಕ್ಕೆ ಯಾವುದೇ ತೊಂದರೆ ಇಲ್ಲ.

ಹೊಸ ಕಾರ್ಯ ಆರಂಭ: ವರಮಹಾಲಕ್ಷ್ಮೀ ಹಬ್ಬದ ದಿನ ಹೊಸ ಉದ್ಯಮ, ವ್ಯಾಪಾರ ಆರಂಭಿಸಬಹುದು. ಆದರೆ ವ್ಯವಹಾರ ಆರಂಭಿಸಬೇಡಿ. ಬೆಳಗ್ಗೆ ಹೋಗಿ ಪೂಜೆ ಮಾಡಿ ಅರ್ಧ ದಿನ ಇದ್ದು ಬಂದು ಬಿಡಿ. ಶನಿವಾರ, ಭಾನುವಾರ ಏನೂ ಮಾಡಬೇಡಿ. ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ವ್ಯವಹಾರಕ್ಕೆ ಚಾಲನೆ ನೀಡಿ.

300 ವರ್ಷದ ಅವಕಾಶ

ಪೂಜೆ ಆದ ನಂತರ ಶನಿವಾರ ವೆಂಕಟರಮಣನ ನಕ್ಷತ್ರ, ಶ್ರವಣ ನಕ್ಷತ್ರ ಬರುತ್ತಿದೆ. ವರಮಹಾಲಕ್ಷ್ಮೀ ಉತ್ತರಾಷಾಡ ನಕ್ಷತ್ರ, ವೆಂಕಟೇಶ್ವರನ ಶ್ರವಣಾ ನಕ್ಷತ್ರ ಈ ರೀತಿ 300 ವರ್ಷದ ನಂತರ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಭಕ್ತಿಯಿಂದ ಪೂಜೆ ಮಾಡಿ ಪ್ರಾರ್ಥನೆ ಮಾಡಿಕೊಳ್ಳಿ. ಭಾನುವಾರ ದಿನ ಚೆನ್ನಾಗಿಲ್ಲ, ಅಂದು ವಿಸರ್ಜನೆ ಬೇಡ. ಸೋಮವಾರ ವಿಸರ್ಜನೆ ಮಾಡಬೇಕು. ಪೂಜೆಗಿಟ್ಟಿದ್ದ ತೆಂಗಿನಕಾಯಿಯನ್ನು ಕೊಬ್ಬರಿ ಮಿಠಾಯಿ ಮಾಡಬಹುದು ಅಥವಾ ಅಡುಗೆಯಲ್ಲಿ ಸೇರಿಸಬಹುದು.

ಮೂರ್ತಿ ಪ್ರತಿಷ್ಠಾಪನೆ ಅನಿವಾರ್ಯವಲ್ಲ

ಮೂರ್ತಿ ಎನ್ನುವುದು ಇತ್ತೀಚೆಗೆ ಆರಂಭಿಸಿರುವುದು. ವ್ರತಗಳಿಗೆ ಸಂಕಲ್ಪ ಪೂಜೆಯೇ ಹೊರತು, ಮೂರ್ತಿ ಪೂಜೆ ಇಲ್ಲ. ಕಲಶದಲ್ಲಿ ಯಾವ ಪೂಜೆಯನ್ನು ಸಂಕಲ್ಪ ಮಾಡುತ್ತೇವೆಯೋ ಅದೇ ದೇವರು ಬರುತ್ತಾನೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಅನೇಕರು ಪೂಜೆಗಳನ್ನು ಮಾಡುತ್ತಾರೆ. ಸರಿಯಾಗಿ ಹೇಳುವವವರು ಎಲ್ಲೂ ಇಲ್ಲ. ಸತ್ಯನಾರಾಯಣ ಪೂಜೆಯಲ್ಲೂ ಮೂರ್ತಿ ಪೂಜೆ ಕಡ್ಡಾಯ ಇಲ್ಲ.

ಯಾವ ಸಮಯದಲ್ಲಿ ವ್ರತ ಅಥವಾ ಪೂಜೆ ಮಾಡಬೇಕು?

ಭಕ್ತಿಯಿಂದ ಯಾವ ಸಮಯದಲ್ಲಿ ಮಾಡಿದರೂ ದೇವರು ಒಲಿಯುತ್ತಾಳೆ. ಆದರೆ, ಬೆಳಗ್ಗೆ 5.15ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಆಚರಿಸುವುದು ಒಳ್ಳೆಯದು. ಆಗ ಸಾಧ್ಯವಾಗದಿದ್ದಲ್ಲಿ, ಬೆಳಗ್ಗೆ 10 ಗಂಟೆಯಿಂದ ಆರಂಭಿಸಬಹುದು. ರಾಹುಕಾಲದಲ್ಲಿ ಪೂಜೆ ಮುಂದುವರಿಯುವುದರಿಂದ ಮತ್ತಷ್ಟು ಉತ್ತಮ ಫಲ ಲಭಿಸುತ್ತದೆ.

ಬೇರೆ ದಿನಗಳಲ್ಲಿ ಆಚರಣೆ

ವರಮಹಾಲಕ್ಷ್ಮೀ ಹಬ್ಬದ ದಿನದಂದು ಮನೆಯಲ್ಲಿ ಅಶುಭವೋ ಅಥವಾ ಮೈಲಿಗೆಯೋ ಅದರೆ ಆಚರಣೆ ಮಾಡಲಾಗುವುದಿಲ್ಲ. ಅಂಥವರು ಯಾವಾಗ ಆಚರಿಸಬೇಕು ಎಂದು ಅನೇಕರು ಕೇಳುತ್ತಾರೆ. ಇಂತಹ ಸಂದರ್ಭದಲ್ಲಿ, ಕೃಷ್ಣಜನ್ಮಾಷ್ಟಮಿ ನಂತರ ಗಣಪತಿ ಹಬ್ಬದೊಳಗೆ ಆಚರಣೆ ಮಾಡಬಹುದು.

ವಿಧವೆಯರೂ ವ್ರತ ಮಾಡಬಹುದು

ವಿಧವೆಯರು ಹಬ್ಬ ಆಚರಣೆ ಮಾಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಮದುವೆ ಆದವರು, ಆಗಿಲ್ಲದವರು ಎಂಬ ಭೇದವಿಲ್ಲ. ವಿಧವೆಯವರನ್ನು ಗೌರವಿಸಿ, ತಾಂಬೂಲವನ್ನು ಕೊಟ್ಟರೆ ಧೂಮಾವತಿ ಸ್ವರೂಪದಲ್ಲಿ ಲಕ್ಷ್ಮೀ ಒಲಿಯುತ್ತಾಳೆ.

ಕರಾವಳಿಯಲ್ಲಿ ಪೂಜೆ ಅವಶ್ಯಕತೆ ಇಲ್ಲ

ಪರಶುರಾಮರು ಮಾಡಿರುವ ಕ್ಷೇತ್ರದಲ್ಲಿ ದೇವರೇ ಸಂಚಾರ ಇರುತ್ತಾನೆ. ಲಕ್ಷ್ಮೀ ಅಲ್ಲೇ ಇರುತ್ತಾಳೆ. ಕರಾವಳಿಯವರಿಗೆ ನಾಗದೇವತೆಗಳೇ ಲಕ್ಷ್ಮೀ. ಹಾಗಾಗಿ ಅಲ್ಲಿಯವರು ವರಮಹಾಲಕ್ಷ್ಮೀ ವ್ರತ ಆಚರಿಸುವುದಿಲ್ಲ. ಆದರೆ ಇತ್ತೀಚೆಗೆ ಕೆಲವರು ಆಚರಣೆ ಮಾಡುತ್ತಿದ್ದಾರೆ. ಮಾಡಿದರೆ ತಪ್ಪೇನೂ ಇಲ್ಲ, ಕಳೆದುಕೊಳ್ಳುವುದೇನೂ ಇಲ್ಲ. ಒಟ್ಟಿನಲ್ಲಿ ದೇವರಿಗೆ ನಮಸ್ಕಾರ ಮಾಡುತ್ತಾರೆ ಎಂದು ಸಂತಸ ಪಡಬೇಕು.

ನೈವೇದ್ಯಕ್ಕೆ ಯಾವುದು ಶ್ರೇಷ್ಠ?

ಇದ್ದವರು ಏನೆಲ್ಲ ಮಾಡುತ್ತಾರೆ, ಇಲ್ಲದವರು ಏನು ಮಾಡುತ್ತಾರೆ? ಕುಕ್ಕರಲ್ಲಿ ಅನ್ನ, ಅದಕ್ಕೆ ತುಪ್ಪ, ಸಕ್ಕರೆ ಹಾಕಿದರೆ ಅದೇ ನೈವೇದ್ಯ. ಕಾಯಿಸಿದ ಹಾಲಿಗೆ ಜೇನುತುಪ್ಪ, ಸಕ್ಕರೆ ಹಾಕಿ ನೈವೇದ್ಯ ಮಾಡಬಹುದು. 13 ಬಾಳೆಹಣ್ಣು ಇಡಬಹುದು. ತೊಗರಿಬೇಳೆ ಬೇಯಿಸಿ ಹೂರಣ, ಒಬ್ಬಟ್ಟು ಮಾಡಬಹುದು. ಮನಃಪೂರ್ತಿಯಾಗಿ ಮಾಡುವುದು ಮುಖ್ಯ ಅಷ್ಟೆ.

ಸರಳವಾಗಿ ಪೂಜೆ ಮಾಡುವುದು ಹೇಗೆ?

ಪೂಜೆ ಎಲ್ಲವೂ ಸರಳವಾಗಿಯೇ ಇರಬೇಕು. ಎಲ್ಲಿಯೂ ದೇವರು ಆಡಂಬರವನ್ನು ಕೇಳಿಲ್ಲ. 32 ನಾಣ್ಯಗಳನ್ನು ಇಟ್ಟು ಪೂಜಿಸಬಹುದು. ಕಾಯಿನ್ ಬೇಡ, ನೋಟು ಇರಲಿ ಎನ್ನುವವರು 1 ರೂ. ನೋಟುಗಳನ್ನಿಡುತ್ತಾರೆ. ಇನ್ನು ಕೆಲವರು ತೋರಿಕೆಗೆ ಸಾವಿರಾರು ರೂ. ಇಡುತ್ತಾರೆ. ಅದಕ್ಕೆ ಅಷ್ಟು ಮಹತ್ವ ನೀಡಬೇಕಿಲ್ಲ. ನಿಮ್ಮ ಶಕ್ತ್ಯಾನುಸಾರ ಪೂಜೆ ಮಾಡಬೇಕು. ಮನಸ್ಸಿನಲ್ಲಿ ಭಕ್ತಿಯಿಂದ ಕೇಳಿಕೊಂಡರೆ ಲಕ್ಷ್ಮೀ ಬರುತ್ತಾಳೆ. ಅವರವರ ಕರ್ವನುಸಾರ ಲಕ್ಷ್ಮೀ ಒಲಿಯುತ್ತಾಳೆ.

ಕಾಲಭೈರವನ ಸ್ಮರಿಸಿ

ಭ್ರಷ್ಟರು, ವಂಚಕರು, ದೇವರನ್ನು ನಂಬದಿರುವವರಿಗೂ ಲಕ್ಷ್ಮೀ ಒಲಿಯುತ್ತಾಳೆ, ಪೂಜೆ ಮಾಡುವವರೂ ಕಷ್ಟದಲ್ಲಿರುತ್ತಾರೆ. ಹೋದ ಜನ್ಮದಲ್ಲಿ ಏನು ಕರ್ಮ ಮಾಡಿರುತ್ತಾರೆ ಎನ್ನುವುದು ಗೊತ್ತಿಲ್ಲ. ಹೋದ ಜನ್ಮದ ಕರ್ಮ ಎಂದು ದೇವರು ಇಟ್ಟಿರುತ್ತಾರೆ. ಹೋದ ಜನ್ಮದ, ಅವರ ತಂದೆತಾಯಿಯ ಫಲವಾಗಿ ಇಂದು ಅನೇಕರು ಹಣವಂತರಾಗಿರುತ್ತಾರೆ. ಈ ಜನ್ಮದಲ್ಲಿ ತಪು್ಪ ಮಾಡಬಾರದು. ಇದೇ ಜನ್ಮದಲ್ಲಿಯೇ ಒಳ್ಳೆಯದಾಗಬೇಕು ಎಂದರೆ ಕಾಲಭೈರವ ಸ್ಮರಣೆ ಮಾಡಬೇಕು.

ಭ್ರಷ್ಟರು, ವಂಚಕರು, ದೇವರನ್ನು ನಂಬದಿರುವವರಿಗೂ ಲಕ್ಷ್ಮೀ ಒಲಿಯುತ್ತಾಳೆ, ಪೂಜೆ ಮಾಡುವವರೂ ಕಷ್ಟದಲ್ಲಿರುತ್ತಾರೆ. ಹೋದ ಜನ್ಮದಲ್ಲಿ ಏನು ಕರ್ಮ ಮಾಡಿರುತ್ತಾರೆ ಎನ್ನುವುದು ಗೊತ್ತಿಲ್ಲ. ಹೋದ ಜನ್ಮದ ಕರ್ಮ ಎಂದು ದೇವರು ಇಟ್ಟಿರುತ್ತಾರೆ. ಹೋದ ಜನ್ಮದ, ಅವರ ತಂದೆತಾಯಿಯ ಫಲವಾಗಿ ಇಂದು ಅನೇಕರು ಹಣವಂತರಾಗಿರುತ್ತಾರೆ. ಈ ಜನ್ಮದಲ್ಲಿ ತಪು್ಪ ಮಾಡಬಾರದು. ಇದೇ ಜನ್ಮದಲ್ಲಿಯೇ ಒಳ್ಳೆಯದಾಗಬೇಕು ಎಂದರೆ ಕಾಲಭೈರವ ಸ್ಮರಣೆ ಮಾಡಬೇಕು.

ಅನ್ಯರನ್ನು ನೋಡಿ ಹಲುಬಬೇಕಿಲ್ಲ

ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ ಏಳಿಗೆ ಆಗುತ್ತಿಲ್ಲ, ಅನ್ಯ ಧರ್ಮದ ಸ್ನೇಹಿತರು ತಮ್ಮನ್ನು ನೋಡಿ ಗೇಲಿ ಮಾಡುತ್ತಾರೆ ಎಂದುಕೊಳ್ಳಬಾರದು. ಪಕ್ಕದಮನೆಯವನನ್ನು ನೋಡಿ ನಾವು ಬದುಕಬಾರದು. ಗುಡಿಸಲಿನವನನ್ನು ಹೋಲಿಸಿಕೊಂಡು, ನಾವು ಉತ್ತಮ ಸ್ಥಿತಿಯಲ್ಲಿದ್ದೇವಲ್ಲ ಎಂದು ಬದುಕಬೇಕು. ತನ್ನ ಪಾಲಿಗೆ ಬಂದ ಕರ್ತವ್ಯವನ್ನು ಅತ್ಯುತ್ತಮವಾಗಿ ಮಾಡಬೇಕು. ನಿಮ್ಮನೆ ಗ್ರಹಗತಿ, ವಾಸ್ತುದೋಷಗಳನ್ನು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net