28ರಿಂದ ಕಾಡೂರು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

brahmakalasha
ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಕಾಡೂರು ಶ್ರೀ ಅಮ್ಮನವರ ದೇವಸ್ಥಾನ.
Published on

ಕೊಕ್ಕರ್ಣೆ: ಬ್ರಹ್ಮಾವರ ತಾಲೂಕಿನ ಕಾಡೂರು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಫೆ.28ರಿಂದ ಮಾ.12ರವರೆಗೆ ನಡೆಯಲಿದೆ.

ಸೂರಾಲು ದೇವಿಪ್ರಸಾದ ತಂತ್ರಿಗಳ ಪ್ರಧಾನ ಆಚಾರ್ಯತ್ವದಲ್ಲಿ ಅರ್ಚಕ ಶ್ರೀಪತಿ ಉಡುಪ ಕಾಡೂರು ಹಾಗೂ ಸುಬ್ರಹ್ಮಣ್ಯ ಭಟ್(ಅವಧಾನಿಗಳು) ಗುಂಡಿಬೈಲು ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆ.28ರಂದು ಬೆಳಗ್ಗೆ ತಂತ್ರಿಗಳ ಪುರಪ್ರವೇಶ, ಸಾಮೂಹಿಕ ಪ್ರಾರ್ಥನೆ, ಮಧುಪೂರ್ವಕ ಆಚಾರ್ಯವರಣ, ಮಹಾಸಂಕಲ್ಪ, ಮಹಾಗಣಪತಿಯಾಗ, ಮಾ.1ರಂದು ಬೆಳಗ್ಗೆ ಮಹಾಗಣಪತಿ ಯಾಗ ಸೇರಿದಂತೆ ಹಲವು ಪೂಜೆಗಳು ನಡೆಯಲಿವೆ. 2ರಂದು ನಾಗದೇವರ ಬಿಂಬ ಪ್ರತಿಷ್ಠಾಪನೆ, ಸ್ನಪನಾದಿಗಳು, ಪ್ರಾಯಶ್ಚಿತ ಹವನಾದಿಗಳು, ಕಲಶಾಭಿಷೇಕ, ಮಹಾಪೂಜೆ ಸೇರಿದಂತೆ ಇತರ ಪೂಜೆಗಳು ಹಾಗೂ ಸಂಜೆ ಭಕ್ತಿ ಗಾಯನ ನಡೆಯಲಿದೆ. 3ರಂದು ಹಾಯ್ಗುಳಿ, ಕಲ್ಲುಕುಟಿಗ, ಕಲ್ಲುರ್ಟಿ, ಕಾಳಮ್ಮ, ಚಾಮುಂಡಿ ಪರಿವಾರಗಳಲ್ಲಿ ನವಕುಂಭ ಸ್ನಪನಾಂಗ ಕಲಶ ಹೋಮ, ಪೂಜಾದಿಗಳು ನಡೆಯಲಿವೆ.

4ರಂದು ನವಗ್ರಹಯಾಗ, ದುರ್ಗಾಯಾಗ, ನಾಗ ಸಾನ್ನಿಧ್ಯದಲ್ಲಿ ಪ್ರಾಯಶ್ಚಿತ ಕರ್ಮಗಳು ಹಾಗೂ ಮಧ್ಯಾಹ್ನ 3ರಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ ಸೂರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಪಿ.ಸುದರ್ಶನ್ ಶೆಟ್ಟಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಮೊಕ್ತೇಸರ ಡಾ.ನಿ.ಬಿ.ವಿಜಯ ಬಲ್ಲಾಳ್ ದೀಪ ಪ್ರಜ್ವಲನೆಗೈಯಲಿದ್ದಾರೆ. ಕಾಡೂರು ದೇವಸ್ಥಾನದ ಮೊಕ್ತೇಸರ ಸತೀಶ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. 5ರಂದು ಪ್ರಾಯಶ್ಚಿತ ತಿಲಹೋಮ, ಮಹಾಮೃತ್ಯುಂಜಯ ಯಾಗ, ಧನ್ವಂತರಿಯಾಗ ಸೇರಿದಂತೆ ಹಲವು ಪೂಜೆಗಳು ನಡೆಯಲಿವೆ. ರಾತ್ರಿ ಪಂಡಿತ್ ಭೀಮಸೇನ್ ಜೋಶಿಯವರ ಶಿಷ್ಯ ಪಂಡಿತ್ ಉಪೇಂದ್ರ ಭಟ್ ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

6ರಂದು 10.45ಕ್ಕೆ ಶ್ರೀ ಅಮ್ಮನವರ ಹಾಗೂ ಶ್ರೀ ವೀರಭದ್ರ ದೇವರ ಬಿಂಬ ಪ್ರತಿಷ್ಠಾಪನೆ, ಜೀವಕಲಶ ಸೇಚನ, ತತ್ವಹೋಮ, ಶಾಂತಿ ಹೋಮಾದಿಗಳು, ಮಹಾಪೂಜೆ, ಸಂಜೆ ಮಹಾಸಾನ್ನಿಧ್ಯದಲ್ಲಿ ದ್ರವ್ಯ ಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ, ಸ್ನಪನಾಧಿವಾಸ ಹೋಮಾದಿಗಳು ನಡೆಯಲಿವೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಡೋಜ ಡಾ.ಜಿ.ಶಂಕರ್ ಗೌರವ ಉಪಸ್ಥಿತಿಯಲ್ಲಿ ಸೂರಾಲು ಅರಮನೆ ಸಂತೋಷ್ ಕುಮಾರ್ ಸಿ.ಬೈದೆಬೆಟ್ಟು ದೀಪ ಪ್ರಜ್ವಲನೆಗೈಯುವರು. ಕಾಡೂರು ಗ್ರಾಪಂ ಅಧ್ಯಕ್ಷ ಜಲಂಧರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

7ರಂದು ಬೆಳಗ್ಗೆ ವಿವಿಧ ಪೂಜೆ, 11ಕ್ಕೆ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12.15ಕ್ಕೆ ಶ್ರೀ ದೇವರ ವಿಶ್ವರೂಪ ದರ್ಶನ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಶೀರ್ವಚನ ನೀಡಲಿದ್ದಾರೆ. ಲೋಕೇಶ ಅಡಿಗ ಬಡಾಕೆರೆ, ದೇವಿಪ್ರಸಾದ ತಂತ್ರಿ, ಸುಬ್ರಹ್ಮಣ್ಯ ಭಟ್, ಶ್ರೀಪತಿ ಉಡುಪ ಕಾಡೂರು ಉಪಸ್ಥಿತರಿರುವರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ದೀಪ ಪ್ರಜ್ವಲನೆಗೈಯಲಿದ್ದಾರೆ. ಕಾಡೂರು ದೇವಸ್ಥಾನದ ಅಧ್ಯಕ್ಷ ಮಹೇಶ ಹೆಗ್ಡೆ ಮೊಳಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಜೋಡು ಜೀಟಿಗೆ ನಾಟಕ ನಡೆಯಲಿದೆ.

9ರಂದು ಚಂಡಿಕಾಯಾಗ, ನವಕುಂಭ ಸ್ನಪನ, ಕಲಶಾಭಿಷೇಕ, ಸಂಜೆ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಾರಂಭ, ರಂಗಪೂಜೆ, ಬಲಿ ನಡೆಯಲಿದೆ. 10ರಂದು ತುಲಾಭಾರ ಸೇವೆ, ಹೂವಿನ ಪೂಜೆ, ಕಲ್ಲುಕಟಿಗ ಹಾಗೂ ಸಪರಿವಾರ ದೈವಗಳ ಸಿರಿಸಿಂಗಾರ ಸೇವೆ, 11ರಂದು ರಾತ್ರಿ ವಾರ್ಷಿಕ ಮಾರಿಪೂಜೆ, 12ರಂದು ಬೆಳಗ್ಗೆ ಮಹಾಸಂಪ್ರೋಕ್ಷಣೆ ಮುಂತಾದ ಕಾರ್ಯಕ್ರಮಗಳು par ಜರುಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net