

EX Girlfriend : ಕ್ಯಾಶ್ ಆನ್ ಡೆಲಿವರಿ ಮೂಲಕ ತನ್ನ ಮಾಜಿ ಗೆಳತಿಗೆ ನೂರಾರು ಬೃಹತ್ ಮೊತ್ತದ ಗಿಫ್ಟ್ಸ್ ಕಳುಹಿಸುವ ಮೂಲಕ ಸೇಡು ತೀರಿಸಿಕೊಂಡಿರುವ ವಿಲಕ್ಷಣ ಘಟನೆಯೊಂದು ಪಶ್ಚಿಮ ಬಂಗಾಳದ ನೊಯ್ಡದಲ್ಲಿ ವರದಿಯಾಗಿದೆ.
ತನ್ನ ಮಾಜಿ ಪ್ರಿಯಕರನೊಬ್ಬ ಕ್ಯಾಶ್ ಆನ್ ಡೆಲಿವರಿ(ಹಣ ಪಾವತಿ ಬಳಿಕ ವಸ್ತು ತಗೆದುಕೊಳ್ಳೋದು) ಗಿಫ್ಟ್ಸ್ ಕಳುಹಿಸುವ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಯುವತಿ ದೂರು ದಾಖಲಿಸಿದ್ದು, ಆತನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
24 ವರ್ಷದ ಬ್ಯಾಂಕ್ ಕಾರ್ಯನಿರ್ವಾಹಕಿಯಾಗಿರುವ ಸಂತ್ರಸ್ತೆ ಲೇಕ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಹಿಂಬಾಲಕ ಹಲವಾರು ಕ್ಯಾಶ್-ಆನ್-ಡೆಲಿವರಿ ಪ್ಯಾಕೇಜ್ಗಳನ್ನು ಕಳುಹಿಸುತ್ತಿದ್ದರಿಂದ ನಿರಂತರ ಕಿರುಕುಳ ಉಂಟಾಗಿದೆ ಮತ್ತು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಂತಹ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಆಕೆಯ ಖಾತೆಗಳನ್ನು ನಿರ್ಬಂಧಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವರದಿಯ ಪ್ರಕಾರ, ಪೊಲೀಸರು ಆರಂಭದಲ್ಲಿ ಆಕೆಯ ಸಹೋದ್ಯೋಗಿಗಳು ಎಂದು ಶಂಕಿಸಿದ್ದಾರೆ. ಬಳಿಕ ಆಕೆಯ ಮಾಜಿ ಗೆಳೆಯ 25 ವರ್ಷದ ಸುಮಾನ್ ಸಿಕ್ದರ್ ಎಂದು ಗುರುತಿಸಲಾಗಿದೆ. ಕಳೆದ ವರ್ಷ ನವಂಬರ್ನಿಂದ ಈ ವರೆಗೆ 300 ಕ್ಕೂ ಅಧಿಕ ಗಿಫ್ಟ್ ಕಳುಹಿಸಿದ್ದಾನೆ.
ನಡೆದಿದ್ದೇನು..?
ಈ ಜೋಡಿ ಇತ್ತೀಚೆಗೆ ಬೇರ್ಪಟ್ಟಿತು. ಆದರೆ, ಇದನ್ನು ಸಹಿಸಲಾಗದೆ, ಸಿಕ್ದರ್ ಸೇಡಿನ ಕ್ರಮವಾಗಿ ಆಕೆಗೆ ಬೃಹತ್ ಪಾರ್ಸೆಲ್ಗಳನ್ನು ಕಳುಹಿಸಲು ಪ್ರಾರಂಭಿಸಿದನು. ಆ ಮಹಿಳೆ ಆನ್ಲೈನ್ ಶಾಪಿಂಗ್ ಅನ್ನು ಇಷ್ಟಪಡುತ್ತಿದ್ದಳು ಮತ್ತು ಆಗಾಗ್ಗೆ ತನ್ನಿಂದ ಉಡುಗೊರೆಗಳನ್ನು ಬೇಡುತ್ತಿದ್ದಳು, ಆದರೆ ಅದನ್ನು ಭರಿಸಲು ಅವನಿಗೆ ಸಾಧ್ಯವಾಗಲಿಲ್ಲ. ಇದರಿಂದ ಇಬ್ಬರು ಬೇರ್ಪಟ್ಟಿದ್ದರು ಎಂದು ಸಿಕ್ದರ್ ಹೇಳಿದ್ದಾರೆ.
ಪಾರ್ಸೆಲ್ ಬುಕ್ ಮಾಡಿ, ಅಪರಿಚಿತ ಸಂಖ್ಯೆಗಳಿಂದ ಸಂದೇಶ ಮತ್ತು ಕರೆಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾಗಿ ಸಿಕ್ದರ್ ಒಪ್ಪಿಕೊಂಡಿದ್ದಾನೆ.(ಏಜೆನ್ಸೀಸ್)