

ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ 14 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಬಳಿಕ ಆಕೆಯ ಶವವನ್ನು ನೇಣು ಹಾಕಿರುವುದು ಬೆಳಕಿಗೆ ಬಂದಿದೆ.
ಘಟನೆಯೂ ಉತ್ತರಪ್ರದೇಶದ ಲಖನೌನ ತಕ್ರೋಹಿ ಎಂಬ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಶಾಹಿದ್ ಎಂದು ಗುರುತಿಸಲಾಗಿದೆ. ತಲೆಮಾರಿಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಮೃತ ಬಾಲಕಿಯ ಪೋಷಕರು ಜೀವನೋಪಾಯಕ್ಕಾಗಿ ತಾವಿರುವ ಮನೆಯಿಂದ ಸ್ವಲ್ಪ ದೂರದಲ್ಲೇ ಲಾಂಡ್ರಿ ಒಂದನ್ನು ನಡೆಸುತ್ತಿದ್ದಾರೆ. ಬಾಲಕಿಯ ಪೋಷಕರ ಚಲನವಲನಗಳನ್ನು ಗಮನಿಸಿದ್ದ ಆರೋಪಿಯೂ ಗುರುವಾರ ಮಧ್ಯಾಹ್ನ 1 ರಿಂದ 1:30ರ ಸುಮಾರಿಗೆ ಆರೋಪಿ ಸಂತ್ರಸ್ತೆಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಆಕೆಯ ಶವವನ್ನು ರೂಮಿನಲ್ಲಿದ್ದ ಫ್ಯಾನಿಗೆ ನೇಣು ಹಾಕಿದ್ದಾನೆ.
ಮೃತ ಬಾಲಕಿ ಹಾಗೂ ಆರೋಪಿ ನಡುವಿನ ಸಂಬಂಧದ ಕುರಿತು ತಿಳಿದು ಬಂದಿಲ್ಲ. ಘಟನೆಯೂ ಆಕೆಯ ತಾಯಿ ಮನೆಗೆ ಆಗಮಿಸಿದ ವೇಳೆ ಬೆಳಕಿಗೆ ಬಂದಿದ್ದು, ಈ ವೇಳೆ ಆರೋಪಿಯೂ ಬಾಲ್ಕನಿಯಲ್ಲಿ ನಿಂತಿದ್ದನ್ನು ಗಮನಿಸಿ ಹಿಡಿಯಲು ಮುಂದಾದಾಗ ಅವರನ್ನು ತಳ್ಳಿ ಎಸ್ಕೇಪ್ ಆಗಿದ್ದಾನೆ. ಆತನ ಪತ್ತೆಗಾಗಿ ವಿಶೇಷ ತಂಡ ಒಂದನ್ನು ರಚಿಸಲಾಗಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯ ಸಾವಿನ ಸುದ್ದಿ ಹೊರಬರುತ್ತಿದ್ದಂತೆ ತಕ್ರೋಹಿ ಪ್ರದೇಶದ ನಿವಾಸಿಗಳು ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.