ಲಾಕ್​ಡೌನ್​ ನಡುವೆ ಘೋರ ದುರಂತ: ಆಟವಾಡ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿ ಕೊಂದು ತಿಂದ ಹಂದಿಗಳು

Pigs
Published on

ಹೈದರಾಬಾದ್​: ಕರೊನಾ ಲಾಕ್​ಡೌನ್​ ನಡುವೆಯೇ ಆತಂಕಕಾರಿ ಘಟನೆಯೊಂದು ಹೈದರಾಬಾದ್​ನಲ್ಲಿ ನಡೆದಿದ್ದು, ಹಂದಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕನ ಮೇಲೆ ದಾಳಿ ನಡೆಸಿ, ಕೊಂದು ಹಾಕಿ, ಆತನ ದೇಹದ ಒಂದು ಭಾಗವನ್ನು ತಿಂದುಹಾಕಿವೆ.

ವಿ. ಹರ್ಷವರ್ಧನ್​ ಮೃತ ಬಾಲಕ. ಹೈದರಾಬಾದ್​ನ ಸೈಬಬಾದ್​ ನಿವಾಸಿಯಾಗಿದ್ದ ಬಾಲಕ ಮಂಗಳವಾರ ಸಂಜೆ 4 ಗಂಟೆಗೆ ಮನೆಯ ಬಳಿಯಿರುವ ನಿರ್ಜನ ಪ್ರದೇಶಕ್ಕೆ ಆಟವಾಡಲು ತೆರಳಿದ್ದ. ಈ ವೇಳೆ ದಾಳಿ ನಡೆಸಿದ ಬಿಡಾಡಿ ಹಂದಿಗಳ ಗುಂಪು ಬಾಲಕನನ್ನು ಕಸದ ರಾಶಿಯತ್ತ ಎಳೆದೊಯ್ದು ಕೊಂದು, ತಿಂದುಹಾಕಿವೆ.

ತುಂಬಾ ರಕ್ತಸಿಕ್ತವಾಗಿ ಬಿದ್ದಿದ್ದ ಮೃತದೇಹವನ್ನು ಸ್ಥಳೀಯರು ನೋಡಿದ ಬಳಿಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಅಲ್ಲಿಗೆ ತೆರಳಿದ ಪೊಲೀಸರಿಗೆ ಬಾಲಕನ ಪಾಲಕರು ಬಂದಾಗಲೇ ಮೃತದೇಹದ ಗುರುತು ಲಭ್ಯವಾಗಿದೆ. ಈ ವೇಳೆ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದಾದರೂ, ಆತ ಸಾವಿಗೀಡಾಗಿ ತುಂಬಾ ಸಮಯ ಆಗಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸೈಬಬಾದ್ ಠಾಣಾಧಿಕಾರಿ ಕೆ. ಶ್ರೀನಿವಾಸ್​, ಹಂದಿ ಗುಂಪೊಂದು ಬಾಲಕನನ್ನು ಕಸದ ರಾಶಿಯ ಸುತ್ತಾ ಎಳೆದಾಡಿ, ದಾಳಿ ನಡೆಸಿ ಕೊಂದು ಹಾಕಿವೆ. ಅಲ್ಲದೆ, ಬಾಲಕನ ದೇಹದ ಒಂದು ಭಾಗವನ್ನು ತಿಂದುಹಾಕಿವೆ ಎಂದು ತಿಳಿಸಿದ್ದಾರೆ.

ಮೃತ ಬಾಲಕ ಸಿಂಗಾರೆಣಿ ಕಾಲನಿಯಲ್ಲಿ ಗುಡಿಸಲಲ್ಲಿ ಪಾಲಕರೊಂದಿಗೆ ವಾಸವಿದ್ದ. ಕರೊನಾ ವೈರಸ್​ ಲಾಕ್​ಡೌನ್​ನಿಂದ ಕೆಲಸವಿಲ್ಲದೇ ಪಾಲಕರು ಮನೆಯಲ್ಲೇ ಉಳಿದಿದ್ದರು. ಆದರೆ, ಇದೇ ಸಮಯದಲ್ಲಿ ತಮ್ಮ ಮಗನಿಗೆ ಬಂದೊದಗಿದ ದುಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇನ್ನು ಆ ಪ್ರದೇಶದಲ್ಲಿ ಸಾಕಷ್ಟು ಹಂದಿಗಳ ಕಾಟ ಇರುವುದನ್ನು ದೂರಿದ್ದರು ಸಹ ಆ ಬಗ್ಗೆ ಸ್ಥಳೀಯ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಹಂದಿಗಳನ್ನು ಬೇರೆಡೆಗೆ ಸಾಗಿಸದೇ ಹೊರತು ನಮಗೆ ನೆಮ್ಮದಿಯಿಲ್ಲ. ಈ ರೀತಿಯ ಪ್ರಕರಣ ಇದೇ ಮೊದಲು ಎನ್ನುತ್ತಾರೆ ಸ್ಥಳೀಯರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net