

ನವದೆಹಲಿ: ಜೀವ ಉಳಿಸಬಹುದಾಗಿದ್ದ ಭಾರತೀಯ ಡೋರ್ನಿಯರ್ ವಿಮಾನ ಬಳಕೆಗೆ ಮಾಲ್ಡೀವ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅನುಮತಿ ನಿರಾಕರಿಸಿದ ಆರೋಪದ ನಡುವೆಯೇ 14 ವರ್ಷದ ಮಾಲ್ಡೀವ್ಸ್ ಬಾಲಕ ಶನಿವಾರ ಮೃತಪಟ್ಟಿದ್ದಾನೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದ ಮತ್ತು ಭಾರತದಿಂದ ಒದಗಿಸಲಾದ ಡೋರ್ನಿಯರ್ ವಿಮಾನವನ್ನು ಮಾನವೀಯ ಉದ್ದೇಶಗಳಿಗಾಗಿ ದ್ವೀಪ ರಾಷ್ಟ್ರಕ್ಕೆ ಒದಗಿಸಲಾಗಿತ್ತು.
ಬ್ರೈನ್ ಟ್ಯೂಮರ್ ಮತ್ತು ಪಾರ್ಶ್ವವಾಯುವಿಗೆ ಒಳಗಾಗಿದ್ದ ಬಾಲಕ ಗಾಫ್ ಅಲಿಫ್ ವಿಲ್ಲಿಂಗಿಲಿಯ ವಿಲ್ಮಿಂಗ್ಟನ್ ದ್ವೀಪದಿಂದ ಮಾಲ್ಡೀವ್ ರಾಜಧಾನಿ ಮಾಲೆಗೆ ಹೆಚ್ಚಿನ ಚಿಕಿತ್ಸೆಗಾಗಿ ಏರ್‌ಲಿಫ್ಟ್ ಮಾಡಬೇಕಿತ್ತು. ಇದಕ್ಕಾಗಿ ಅವರು ಪ್ರಯತ್ನಿಸಿದಾಗ ಮಾಲ್ಡೀವ್ಸ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿತು. ಬಳಿಕ ಅತನ ಕುಟುಂಬವು ಮಾಲೆಗೆ ವೈಮಾನಿಕ ವರ್ಗಾವಣೆಗೆ ಮನವಿ ಮಾಡಿತು. ಆದರೆ ಗುರುವಾರ ಬೆಳಗ್ಗೆಯವರೆಗೆ ಸಂಕಷ್ಟದ ಕರೆಗೆ ಉತ್ತರಿಸಲಾಗಿಲ್ಲ. ಈ 16 ನಿರ್ಣಾಯಕ ಗಂಟೆಗಳ ವಿಳಂಬವು ಬಾಲಕನ ಪ್ರಾಣಪಕ್ಷಿ ಹಾರಿಹೋಗುವಂತೆ ಮಾಡಿತ್ತು. ಇದು ಗಾಫ್ ಅಲಿಫ್ ವಿಲ್ಲಿಂಗಿಲಿಯ ಆಸ್ಪತ್ರೆ ಬಳಿ ಪ್ರತಿಭಟನೆಗೂ ಕಾರಣವಾಯಿತು. ಸರ್ಕಾರದ ನಿರ್ಲಕ್ಷದ ಬಗ್ಗೆ ಕುಟುಂಬಸ್ಥರು ಹಾಗೂ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿದ ಮೃತ ಬಾಲಕನ ತಂದೆ, ಸ್ಟ್ರೋಕ್ ಆದ ತಕ್ಷಣ ಮಾಲೆಗೆ ಕರೆದೊಯ್ಯಲು ನಾವು ಐಲ್ಯಾಂಡ್ ಏವಿಯೇಷನ್‌ಗೆ ಕರೆ ಮಾಡಿದರೂ, ಅವರು ನಮ್ಮ ಕರೆಗಳಿಗೆ ಉತ್ತರಿಸಲಿಲ್ಲ. ಗುರುವಾರ ಬೆಳಗ್ಗೆ 8:30 ಕ್ಕೆ ಅವರು ಫೋನ್‌ಗೆ ಉತ್ತರಿಸಿದರು. ಬಳಿಕ ಮಾಲೆಗೆ ಕರೆದುಕೊಂಡು ಹೋಗಿ, ಐಸಿಯುಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ ಎಂದರು.
ಭಾರತದ ವಿರುದ್ಧ ಅಧ್ಯಕ್ಷರ ದ್ವೇಷ ಮುಂದುವರಿದಿದ್ದು, ಜನರು ತಮ್ಮ ಪ್ರಾಣವನ್ನು ನೀಡಬೇಕಿಲ್ಲ ಎಂದು ಮಾಲ್ಡೀವ್ಸ್ ಸಂಸದ ಮೀಕೈಲ್ ನಸೀಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅಧಿಕಾರ ವಹಿಸಿಕೊಂಡ ನಂತರ ವಿದೇಶಾಂಗ ನೀತಿಯಲ್ಲಿ ಬದಲಾವಣೆಯಾಗಿದ್ದು, ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿ, ಭಾರತ ವಿರೋಧಿ ನಿಲುವು ತಾಳಿರುವುದು ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ.