

ಟೋಕಿಯೊ: ‘ಕ್ರೀಡೆ ಎಷ್ಟೊಂದು ಎಂದರೆ ವಿಚಿತ್ರ ಎಂದರೆ ಕೆಲವೊಮ್ಮೆ ಇಬ್ಬರು ಚಾಂಪಿಯನ್‌ಗಳನ್ನು ನೀಡುತ್ತದೆ’ ಎಂಬುದು ಜನಪ್ರಿಯ ಮಾತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾನುವಾರ ಈ ಮಾತು ನಿಜವಾಯಿತು. ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಕತಾರ್ ಮತ್ತು ಇಟಲಿಯ ಸ್ಪರ್ಧಿಗಳಿಬ್ಬರೂ ಚಿನ್ನದ ಪದಕ ಹಂಚಿಕೊಂಡರು. ಹೀಗಾಗಿ ಬೆಳ್ಳಿಯ ಪದಕ ಯಾರಿಗೂ ಸಿಗಲಿಲ್ಲ. ನಂತರದ ಸ್ಪರ್ಧಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಪುರುಷರ ಹೈಜಂಪ್‌ನಲ್ಲಿ ಕತಾರ್‌ನ ಮುತಜ್ ಎಸ್ಸಾ ಮತ್ತು ಇಟಲಿಯ ಟಂಬೆರಿ ಗಿಯಾನ್‌ಮಾರ್ಕೋ ಇಬ್ಬರೂ 2.37 ಮೀಟರ್ ಹಾರಿದ ಸಾಧನೆಯೊಂದಿಗೆ ಚಿನ್ನದ ಪದಕ ಹಂಚಿಕೊಂಡರು. ಇಬ್ಬರೂ 2.37 ಮೀಟರ್ ಎತ್ತರವನ್ನು 7ನೇ ಪ್ರಯತ್ನದಲ್ಲಿ ಹಾರಿದ ಬಳಿಕ ಕೊನೇ ಪ್ರಯತ್ನದಲ್ಲಿ 2.39 ಮೀಟರ್ ಎತ್ತರ ಹಾರಲು ವಿಫಲರಾದರು. ಇದರಿಂದಾಗಿ ಇಬ್ಬರೂ ಚಿನ್ನದ ಪದಕ ಹಂಚಿಕೊಳ್ಳಲು ಸಮ್ಮತಿಸಿದರು. ಬೆಲಾರಸ್‌ನ ಮಕ್ಸಿಮ್ ನೆದಸೆಕೌ ಕೂಡ 2.37 ಮೀ. ಹಾರಿದ್ದರೂ, ಹೆಚ್ಚಿನ ಫೌಲ್‌ನಿಂದಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಒಲಿಂಪಿಕ್ಸ್ ನಿಯಮದ ಪ್ರಕಾರ ಇಬ್ಬರೂ ಸ್ಪರ್ಧಿಗಳು ಒಪ್ಪಿದರೆ ಮಾತ್ರ ಈ ರೀತಿ ಚಿನ್ನದ ಪದಕವನ್ನು ಇಬ್ಬರಿಗೂ ಹಂಚಲು ಅವಕಾಶವಿದೆ. ಎಸ್ಸಾ-ಟಂಬೆರಿ ಇಬ್ಬರೂ ಸಮ್ಮತಿಸಿದ್ದರಿಂದ ಸಂಘಟಕರು ಚಿನ್ನದ ಪದಕ ಹಂಚಿದರು.
ಟ್ರಿಪಲ್ ಜಂಪ್‌ನಲ್ಲಿ ವಿಶ್ವದಾಖಲೆ
ವೆನೆಜುವೆಲಾದ ಯುಲಿಮರ್ ರೊಜಸ್ 15.67 ಮೀ. ಹಾರುವ ಮೂಲಕ ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ವಿಶ್ವದಾಖಲೆ ಬರೆದು ಚಿನ್ನ ಗೆದ್ದರು. ಉಕ್ರೇನ್‌ನ ಇನೆಸ್ಸಾ ಕ್ರೆವೆಟ್ಸ್ 1995ರಲ್ಲಿ 15.50 ಮೀ. ಹಾರಿದ್ದು ಹಿಂದಿನ ವಿಶ್ವದಾಖಲೆ. ಪೋರ್ಚುಗಲ್‌ನ ಪ್ಯಾಟ್ರಿಸಿಯಾ ಮಮೊನಾ (15.01) ಬೆಳ್ಳಿ ಮತ್ತು ಸ್ಪೇನ್‌ನ ಅನಾ ಪೆಲೆಟೀರೋ (14.87) ಕಂಚು ಜಯಿಸಿದರು.
ಚೀನಾದ ಗೊಂಗ್‌ಗೆ ಶಾಟ್‌ಪುಟ್ ಚಿನ್ನ
ಚೀನಾದ ಗೊಂಗ್ ಲಿಜಿವೊ ಮಹಿಳೆಯರ ಶಾಟ್‌ಪುಟ್ ಸ್ಪರ್ಧೆಯಲ್ಲಿ ವೈಯಕ್ತಿಕ ಶ್ರೇಷ್ಠ 20.58 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಜಯಿಸಿದರು. ಅಮೆರಿಕದ ರೆವನ್ ಸೌಂಡರ್ಸ್ (19.79 ಮೀ.) ಬೆಳ್ಳಿ ಮತ್ತು ನ್ಯೂಜಿಲೆಂಡ್‌ನ ವಲೆರಿ ಆಡಮ್ಸ್ (19.62 ಮೀ.) ಕಂಚಿನ ಪದಕ ಪಡೆದರು. 2017, 2019ರ ವಿಶ್ವ ಚಾಂಪಿಯನ್‌ಷಿಪ್ ಸ್ವರ್ಣ ವಿಜೇತೆ ಗೊಂಗ್‌ಗೆ ಒಲಿಂಪಿಕ್ಸ್‌ನಲ್ಲಿ ಇದು ಮೊದಲ ಚಿನ್ನವಾಗಿದೆ. 32 ವರ್ಷದ ಅವರು ಬೀಜಿಂಗ್‌ನಲ್ಲಿ ಕಂಚು ಮತ್ತು ಲಂಡನ್‌ನಲ್ಲಿ ಬೆಳ್ಳಿ ಜಯಿಸಿದ್ದರೆ, ರಿಯೋದಲ್ಲಿ ಪದಕ ವೇದಿಕೆ ಏರಲು ವಿಫಲರಾಗಿದ್ದರು. 5 ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ನ್ಯೂಜಿಲೆಂಡ್‌ನ ಮೊದಲ ಮಹಿಳೆ ಎನಿಸಿದ ಕಂಚು ವಿಜೇತೆ ವಲೆರಿ ಆಡಮ್ಸ್ 2 ಮಕ್ಕಳ ತಾಯಿಯೂ ಆಗಿದ್ದಾರೆ. ಬೆಳ್ಳಿ ವಿಜೇತೆ ಸೌಂಡರ್ಸ್ ‘ಹಲ್ಕ್’ ಮಾಸ್ಕ್ ಧರಿಸಿ ಸ್ಪರ್ಧಿಸುವ ಮೂಲಕ ಗಮನಸೆಳೆದರು.
ಅಥ್ಲೆಟಿಕ್ಸ್‌ನಲ್ಲಿ ಸೋಮವಾರದ ಫೈನಲ್ಸ್:
ಬೆಳಗ್ಗೆ 6.50: ಪುರುಷರ ಲಾಂಗ್‌ಜಂಪ್; ಬೆಳಗ್ಗೆ 8.20: ಮಹಿಳೆಯರ 100 ಮೀ. ಹರ್ಡಲ್ಸ್; ಸಂಜೆ 4.30: ಮಹಿಳೆಯರ ಡಿಸ್ಕಸ್ ಥ್ರೋ; ಸಂಜೆ 5.45: ಪುರುಷರ 3000 ಮೀ. ಸ್ಟೀಪಲ್‌ಚೇಸ್; ಸಂಜೆ 6.10: ಮಹಿಳೆಯರ 5000 ಮೀ.