

ಕೊಲಂಬೊ: ಭಾರತ ವಿರುದ್ಧ ಮೊಟ್ಟಮೊದಲ ಬಾರಿಗೆ ಟಿ20 ಸರಣಿ ಗೆದ್ದ ಸಾಧನೆ ಮಾಡಿದ ದೆಸುನ್ ಶನಕ ಪಡೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) 74.37 ಲಕ್ಷ ರೂಪಾಯಿ (1 ಲಕ್ಷ ಡಾಲರ್) ಬೋನಸ್ ಬಹುಮಾನ ಪ್ರಕಟಿಸಿದೆ. ಇದು ಶ್ರೀಲಂಕಾ ತಂಡ ಭಾರತದ ವಿರುದ್ಧ ಕಳೆದ 13 ವರ್ಷಗಳಲ್ಲಿ ಕಂಡ ಮೊದಲ ದ್ವಿಪಕ್ಷೀಯ ಸರಣಿ ಗೆಲುವು ಕೂಡ ಆಗಿದೆ.
ತಂಡಕ್ಕೆ ಅಗತ್ಯವಾಗಿದ್ದ ಗೆಲುವು ಆಟಗಾರರು, ಕೋಚ್ ಮತ್ತು ತರಬೇತಿ ಸಿಬ್ಬಂದಿಯ ಪರಿಶ್ರಮದಿಂದ ಬಂದಿದೆ. ಹೀಗಾಗಿ ನಾವು ತಂಡಕ್ಕೆ ಬಹುಮಾನ ಘೋಷಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಎಸ್‌ಎಲ್‌ಸಿ ಪ್ರಕಟಣೆ ತಿಳಿಸಿದೆ.
ಏಕದಿನ ಸರಣಿಯಲ್ಲಿ 1-2ರಿಂದ ಸೋತಿದ್ದ ಶ್ರೀಲಂಕಾ ತಂಡಕ್ಕೆ ಅದಕ್ಕೆ ಮುನ್ನ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ಪ್ರವಾಸದಲ್ಲೂ ಸತತ ಸೋಲುಗಳನ್ನು ಕಂಡಿತ್ತು. ಹೀಗಾಗಿ ತಂಡದ ಯುವ ಆಟಗಾರರಿಗೆ ಉತ್ತೇಜನ ತುಂಬುವ ಪ್ರಯತ್ನವನ್ನು ಎಸ್‌ಎಲ್‌ಸಿ ಮಾಡಿದೆ.