

ಸಿನಿಮಾ ಸೇರಿ ಹಲವು ಬಗೆಯ ಪ್ರದರ್ಶನಗಳಿಗೆ ಆನ್ಲೈನ್ನಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ನೀಡುತ್ತಿದ್ದ ಬುಕ್ ಮೈ ಶೋ ಕಂಪನಿ ಇದೀಗ ನಷ್ಟದಲ್ಲಿದೆ. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮಾಲ್ಗಳು, ಮಲ್ಟಿಪ್ಲೆಕ್ಸ್ಗಳು ಮುಚ್ಚಿದ್ದರಂದ ಬುಕ್ಮೈ ಶೋ ಸಂಸ್ಥೆಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ಬಿದ್ದಿದ್ದು, 270 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಇನ್ನುಳಿದವರು ಕಂಪನಿ ಉದ್ಯೋಗಿಯಾಗಿ ಇರಲಿದ್ದು, ಅವರಿಗೆ ಯಾವುದೇ ಸಂಬಳ ಇರುವುದಿಲ್ಲ. ಬದಲಿಗೆ ಅವರವರ ಸ್ಥಾನಮಾನ ಆಧರಿಸಿ ಆರೋಗ್ಯ ವಿಮೆ, ಗ್ರಾಚುಟಿ ಸೇರಿ ಕೆಲ ಸವಲತ್ತುಗಳನ್ನು ನೀಡಲು ನಿರ್ಧರಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕಂಪನಿಯ ಸಿಇಒ ಆಶಿಷ್ ಹೇಮ್ರಾಜಿನಿ, ಪ್ರಸ್ತುತ ಸ್ಥಿತಿಗತಿ ಮತ್ತು ಪ್ರತಿಕೂಲ ವಾತಾವರಣ ಸೃಷ್ಟಿಯಾಗಿದ್ದರಿಂದ 270 ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಬುಕ್ ಮೈ ಶೋದಲ್ಲಿ ಭಾರತದಾದ್ಯಂತ ಒಟ್ಟು 1450ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದು, ಆ ಪೈಕಿ ಆಯ್ದ ಕೆಲವರಿಗೆ ಗೇಟ್ಪಾಸ್ ನೀಡಲಾಗಿದೆ ಎಂದಿದ್ದಾರೆ.
ಕಳೆದ ಎರಡು ತಿಂಗಳಿಂದ ಸಿನಿಮಾ ಸಂಬಂಧಿ ಕೆಲಸಗಳು ಸ್ಥಗಿತಗೊಂಡಿವೆ. ಜನಸಂಖ್ಯೆ ಹೆಚ್ಚು ಸೇರುವ ಪ್ರದೇಶಗಳನ್ನು ಇನ್ನಷ್ಟು ದಿನಗಳ ಕಾಲ ತೆರೆಯದಂತೆ ಕೇಂದ್ರ ಕಟ್ಟು ನಿಟ್ಟಿನ ಆದೇಶ ನೀಡಿದೆ. ಆ ನೀತಿಯಿಂದ ಸಿನಿಮಾ ಮಾಲ್ಗಳು ಖಾಲಿಯಾಗಿವೆ. ಆನ್ಲೈನ್ ಬುಕಿಂಗ್ ವ್ಯವಸ್ಥೆಯೇ ಇಲ್ಲದಂತಾಗಿದೆ. ಇದೆಲ್ಲವನ್ನು ಅರಿತು, ಈ ಕ್ರಮಕ್ಕೆ ಮುಂದಾಗಿರುವ ಬುಕ್ ಮೈ ಶೋ ಕಂಪನಿ, ಹಾಗೆ ತೆಗೆದುಹಾಕುತ್ತಿರುವ 270 ಮಂದಿಗೆ ಎರಡು ತಿಂಗಳು ಸಂಬಳವನ್ನೂ ನೀಡಿದೆ. ಸೆಪ್ಟಂಬರ್ ವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡಿದೆ.
ಕೇವಲ ಸಿಬ್ಬಂದಿಯನ್ನು ತೆಗೆದು ಹಾಕುವುದಷ್ಟೇ ಅಲ್ಲದೆ, ಕಂಪನಿ ಆಯ-ವ್ಯಯದಲ್ಲಿಯೂ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲು ಚಿಂತನೆ ನಡೆಸಿದೆ. ಖರ್ಚಿನ ಬಾಬ್ತನ್ನು ಕಡಿಮೆ ಮಾಡುವುದರ ಜತೆಗೆ, ನೌಕರರಿಗೆ ನೀಡುತ್ತಿದ್ದ ಸೌಲಭ್ಯಗಳನ್ನೂ ಕಡಿತಗೊಳಿಸಿದೆ. (ಏಜೆನ್ಸೀಸ್)