

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಜೆಡಿಎಸ್ ಅಭ್ಯರ್ಥಿ ಬರೋಬ್ಬರಿ 408 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ.
ಆದರೆ ಇವರು ಯಾವುದೇ ಸದ್ದು ಗದ್ದಲವಿಲ್ಲದೆ ಸರಳವಾಗಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಅಂದಹಾಗೆ ಬೊಮ್ಮನಹಳ್ಳಿ ಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದವರು ಕೆ. ನಾರಾಯಣ ರಾಜು. ಇವರು ಈ ಹಿಂದೆ ಬಿಜೆಪಿಯಲ್ಲಿ ಬಿಳರೆಕಳ್ಳಿಯಿಂದ ಕಾರ್ಪೋರೇಟರ್ ಆಗಿದ್ದವರು.
ಆದರೆ ಇತ್ತೀಚೆಗೆ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಆಡಂಬರದ ಶೋ ಮಾಡದೆ ಕೇವಲ ಐದು ಜನರೊಟ್ಟಿಗೆ ಬಂದು ನಾಮಪತ್ರ ಸಲ್ಲಿಸಿ ತೆರಳಿದ್ದಾರೆ. ಇವರಿಗೆ ರಾಜ್ಯಸಭಾ ಮಾಜಿ ಸದಸ್ಯ ಉಪೇಂದ್ರ ರೆಡ್ಡಿ ಮತ್ತಿತರರು ಸಾಥ್ ನೀಡಿದ್ದರು. ಇಲ್ಲಿ ಮೂರು ಬಾರಿ ಎಂ ಸತೀಶ್ ರೆಡ್ಡಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದು ಅವರ ವಿರುದ್ಧವಾಗಿ ಕೆ. ನಾರಾಯಣ ರಾಜು ಸ್ಪರ್ಧಿಸಲಿದ್ದಾರೆ.