ಮುಂಬೈ: ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ(Chahal-Dhanashree Divorce) ಸುದ್ದಿಯಿಂದಾಗಿ ಅವರ ಹೆಸರುಗಳು ಕೆಲವು ಸಮಯದಿಂದ ಮುನ್ನೆಲೆಯಲ್ಲಿದೆ. ಈ ಇಬ್ಬರೂ ಸುಮಾರು 5 ವರ್ಷಗಳ ಹಿಂದೆ ವಿವಾಹವಾದರು, ಈಗ ಆ ಸಂಬಂಧ ಮುರಿದು ಬೀಳುವ ಹಂತದಲ್ಲಿದೆ. ವಿಚ್ಛೇದನದ ಕುರಿತು ಇಬ್ಬರೂ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈಗ ಬಾಂಬೆ ಹೈಕೋರ್ಟ್ ಈ ಇಬ್ಬರ ವಿಚ್ಛೇದನವನ್ನು ದೃಢಪಡಿಸಿದೆ.
ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನವನ್ನು ಗುರುವಾರ(ಮಾರ್ಚ್ 20) ನಿರ್ಧರಿಸುವಂತೆ ಬಾಂಬೆ ಹೈಕೋರ್ಟ್ ಬುಧವಾರ(ಮಾರ್ಚ್ 19) ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ. ಆದರೆ ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಸಮಯದಲ್ಲಿ ಪ್ರಸ್ತುತ ಋತುವಿನಲ್ಲಿ ಪಂಜಾಬ್ ಪರ ಯುಜ್ವೇಂದ್ರ ಚಹಾಲ್ ಅವರು ಆಡುತ್ತಿರುವುದನ್ನು ಕಾಣಬಹುದು. ಇದಾದ ನಂತರ ಅವರು ಮುಂದಿನ ಎರಡು ತಿಂಗಳು ಈ ಪಂದ್ಯಾವಳಿಯಲ್ಲಿ ನಿರತರಾಗಿರುತ್ತಾರೆ. ಚಾಹಲ್ ಅವರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 20ರೊಳಗೆ ವಿಚ್ಛೇದನ ಅರ್ಜಿಯ ಕುರಿತು ಅಂತಿಮ ನಿರ್ಧಾರವನ್ನು ನೀಡುವಂತೆ ಹೈಕೋರ್ಟ್ ಕುಟುಂಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ಪ್ರಕಾರ ಆರು ತಿಂಗಳ ಕೂಲಿಂಗ್-ಆಫ್ ಅವಧಿಯಲ್ಲಿ ತಮ್ಮ ದಾಂಪತ್ಯ ಕಾಪಾಡಿಕೊಳ್ಳುವ ಸಾಧ್ಯತೆಗಳನ್ನು ಅನ್ವೇಷಿಸದೆ ವಿಚ್ಛೇದನ ಪಡೆಯಲು ಅವಕಾಶ ನೀಡಬೇಕೆಂದು ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ನ್ಯಾಯಾಲಯವನ್ನು ಕೋರಿದ್ದರು. ಹೈಕೋರ್ಟ್ 6 ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಸಹ ಮನ್ನಾ ಮಾಡಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B(2)ರ ಪ್ರಕಾರ, ಕುಟುಂಬ ನ್ಯಾಯಾಲಯವು ವಿಚ್ಛೇದನಕ್ಕಾಗಿ ಪರಸ್ಪರ ಅರ್ಜಿಯನ್ನು ಸಲ್ಲಿಸಿದ ಆರು ತಿಂಗಳ ನಂತರವೇ ಪರಿಗಣಿಸಬಹುದು. ಆ ಸಮಯದಲ್ಲಿ ಅವರು ವಿವಾಹದ ಕುರಿತು ಯಾವುದೇ ಇತ್ಯರ್ಥ ಅಥವಾ ಮರುಪರಿಶೀಲನೆ ಸಾಧ್ಯವೇ ಎಂದು ನೋಡಲು ಪ್ರಯತ್ನಿಸಬಹುದು. ಆದರೆ ಇಬ್ಬರ ನಡುವೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದವಿಲ್ಲದಿದ್ದರೆ, ಈ ಕೂಲಿಂಗ್ ಆಫ್ ಅವಧಿಯನ್ನು ಮನ್ನಾ ಮಾಡಬಹುದು ಎಂದು ಸುಪ್ರೀಂಕೋರ್ಟ್ 2017ರಲ್ಲಿ ತೀರ್ಪು ನೀಡಿತ್ತು. ಅದರ ಪ್ರಕಾರ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ 6 ತಿಂಗಳ ಕೂಲಿಂಗ್-ಆಫ್ ಅವಧಿಯನ್ನು ಹೈಕೋರ್ಟ್ ಮನ್ನಾ ಮಾಡಿದೆ.(ಏಜೆನ್ಸೀಸ್)