ಮಹಿಳೆಯರು ಕೇವಲ ಭೋಗದ ವಸ್ತುಗಳಾಗಿದ್ದಾರೆ: ಬಾಲಿವುಡ್ ಐಟಂ ಸಾಂಗ್‌ಗಳ ವಿರುದ್ಧ ಶಬಾನಾ ಅಜ್ಮಿ ಕೆಂಡಾಮಂಡಲ! Shabana Azmi on Item Songs

 ಬಾಲಿವುಡ್​ ಹಿರಿಯ ನಟಿ ಶಬಾನಾ ಅಜ್ಮಿ (Shabana Azmi)
ಬಾಲಿವುಡ್​ ಹಿರಿಯ ನಟಿ ಶಬಾನಾ ಅಜ್ಮಿ (Shabana Azmi)
Published on

ಪ್ರಮುಖ ಮುಖ್ಯಾಂಶಗಳು

  • ಐಟಂ ಸಾಂಗ್​ಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವಾಗಿ ತೋರಿಸಲಾಗುತ್ತಿದೆ
  • ಬಾಲಿವುಡ್​ನಲ್ಲಿ ತಯಾರಾಗುವ ಐಟಂ ಸಾಂಗ್​ಗಳ ಬಗ್ಗೆ ಮೌನ ಮುರಿದ ಶಬಾನಾ ಅಜ್ಮಿ
  • ಮುಂಬೈನಲ್ಲಿ ನಡೆದ ವೀ ದಿ ವುಮೆನ್ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟಿ
ಮುಂಬೈ: ಬಾಲಿವುಡ್ ಸಿನಿಮಾಗಳಲ್ಲಿ ಐಟಂ ಹಾಡುಗಳು ಎಂಬುದು ಕೇವಲ ಮನರಂಜನೆ ಭಾಗವಾಗಿ ಉಳಿದಿಲ್ಲ, ಅದು ಸಿನಿಮಾದ ಯಶಸ್ಸಿನ ಸೂತ್ರವಾಗಿಬಿಟ್ಟಿದೆ. ಐಟಂ ಹಾಡುಗಳಲ್ಲಿ ಮಹಿಳೆಯರನ್ನು ಕೇವಲ ವಸ್ತುವನ್ನಾಗಿ ಚಿತ್ರಿಸುವ ಬಗ್ಗೆ ಹಿರಿಯ ನಟಿ ಶಬಾನಾ ಅಜ್ಮಿ (Shabana Azmi on Item Songs) ಆಕ್ರೋಶ ಹೊರಹಾಕಿದ್ದಾರೆ.
ಮುಂಬೈನಲ್ಲಿ ನಡೆದ ವೀ ದಿ ವುಮೆನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಟಂ ಹಾಡುಗಳಲ್ಲಿ ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುತ್ತಿರುವ ಕುರಿತು ಮಾತನಾಡಿದ್ದಾರೆ.

ಕ್ಯಾಮೆರಾ ಕಣ್ಣು ಮಹಿಳೆಯರ ದೇಹಕ್ಕೆ ಸೀಮಿತವಾಗಿದೆ!

ಐಟಂ ಹಾಡುಗಳನ್ನು ಚಿತ್ರೀಕರಿಸುವ ವಿಧಾನದ ಬಗ್ಗೆ ಶಬಾನಾ ಅಜ್ಮಿ ಮಾರ್ಮಿಕವಾಗಿ ಮಾತನಾಡಿದ್ದಾರೆ. ಸಿನಿಮಾ ಎಂದರೆ ಅದು ಕೇವಲ ದೃಶ್ಯಗಳಲ್ಲ, ಅದು ಪ್ರೇಕ್ಷಕರ ಗ್ರಹಿಕೆಯನ್ನು ರೂಪಿಸುವ ಶಕ್ತಿ. ಐಟಂ ಹಾಡುಗಳಲ್ಲಿ ಕ್ಯಾಮೆರಾ ಮಹಿಳೆಯ ದೇಹದ ಕೆಲವು ಭಾಗಗಳ ಮೇಲೆ ಕೇಂದ್ರೀಕರಿಸುತ್ತದೆ.
ಮಹಿಳೆಯನ್ನು ತುಂಡು-ತುಂಡು ದೃಶ್ಯಗಳಾಗಿ ತೋರಿಸುವ ಮೂಲಕ ಆಕೆಯನ್ನು ಒಬ್ಬ ವ್ಯಕ್ತಿಯಾಗಿ ನೋಡುವ ಬದಲು ಒಂದು ವಸ್ತುವಾಗಿ ಸಮಾಜಕ್ಕೆ ಬಿಂಬಿಸಲಾಗುತ್ತಿದೆ. ಇಲ್ಲಿ ಮಹಿಳೆ ತನ್ನ ನಿಯಂತ್ರಣವನ್ನು ಕಳೆದುಕೊಂಡು ಪುರುಷನ ದೃಷ್ಟಿಗೆ ಶರಣಾಗುತ್ತಾಳೆ, ಎಂದು ಅವರು ವಿವರಿಸಿದ್ದಾರೆ.

ಪುರುಷರು ಮಾಡ್ತಾರೆ ಅಂತ ನಾವೂ ಮಾಡ್ಬೇಕಾ?

ಈ ಹಾಡುಗಳಲ್ಲಿನ ಸಾಹಿತ್ಯ ಮತ್ತು ಮಹಿಳೆಯರ ವಸ್ತುನಿಷ್ಠೀಕರಣದ ಬಗ್ಗೆಯೂ ಶಬಾನಾ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ಹಾಡುಗಳ ಸಾಹಿತ್ಯ ಕೇಳಿದಾಗ ನನಗೆ ತುಂಬಾ ಅನಾನುಕೂಲವೆನಿಸುತ್ತದೆ. ಅನೇಕ ಮಹಿಳೆಯರು ಹೇಳುತ್ತಾರೆ, ಪುರುಷರು ಇಂತಹ ಹಾಡುಗಳಲ್ಲಿ ಕಾಣಿಸಿಕೊಂಡಾಗ ನಾವು ಯಾಕೆ ಮಾಡಬಾರದು? ಎಂದು. ಆದರೆ ನನ್ನ ಪ್ರಶ್ನೆ ಏನೆಂದರೆ, ಪುರುಷರು ವಸ್ತುನಿಷ್ಠರಾಗಲು ಸಿದ್ಧರಿದ್ದಾರೆ ಎಂಬ ಕಾರಣಕ್ಕೆ ಮಹಿಳೆಯರೂ ಅದನ್ನೇ ಒಪ್ಪಿಕೊಳ್ಳಬೇಕೆ? ಕಥೆಗೂ ಈ ಹಾಡಿಗೂ ಸಂಬಂಧವೇ ಇರುವುದಿಲ್ಲ, ಇದು ಕೇವಲ ಪ್ರೇಕ್ಷಕರನ್ನು ಸೆಳೆಯಲು ನಡೆಸುವ ಚೀಫ್​ ಟ್ರಿಕ್ಸ್ ಆಗಿದೆ ಎಂದಿದ್ದಾರೆ.

ಸಮಾಜದ ಪ್ರತಿಕ್ರಿಯೆ ಬಗ್ಗೆ ಕಳವಳ

ಶಬಾನಾ ಅಜ್ಮಿ ಅವರಿಗೆ ಎಲ್ಲಕ್ಕಿಂತ ಹೆಚ್ಚು ಕಾಡುತ್ತಿರುವ ವಿಷಯವೆಂದರೆ ಸಮಾಜದ ಪ್ರತಿಕ್ರಿಯೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಚಿಕ್ಕ ಮಕ್ಕಳು ಚೋಲಿ ಕೆ ಪೀಚೆ ಕ್ಯಾ ಹೈ ರೀತಿಯ ಅಶ್ಲೀಲ ಹಾಡುಗಳಿಗೆ ಕುಣಿಯುತ್ತಿದ್ದರೆ, ಸುತ್ತಲಿರುವವರು ಅದನ್ನು ನೋಡಿ ನಗುತ್ತಾ ಪ್ರೋತ್ಸಾಹಿಸುತ್ತಾರೆ. ಯಾರೂ ಆ ಹಾಡಿನ ಸಾಹಿತ್ಯದ ಬಗ್ಗೆ ಅಥವಾ ಅದು ಮಕ್ಕಳ ಮೇಲೆ ಬೀರುವ ಪ್ರಭಾವದ ಬಗ್ಗೆ ಯೋಚಿಸುತ್ತಿಲ್ಲ, ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್‌ನಲ್ಲಿ ಶೀಲಾ ಕಿ ಜವಾನಿ, ಮುನ್ನಿ ಬದ್ನಾಮ್, ಜಲೇಬಿ ಬಾಯಿ ನಂತಹ ಹಾಡುಗಳು ಚಾರ್ಟ್‌ಬಸ್ಟರ್ ಆಗಿದ್ದರೂ, ಅವು ಮಹಿಳೆಯ ಘನತೆಗೆ ಧಕ್ಕೆ ತರುತ್ತವೆಯೇ ಎಂಬ ಚರ್ಚೆಗೆ ಶಬಾನಾ ಅಜ್ಮಿ ಅವರ ಈ ಮಾತುಗಳು ಈಗ ಹೊಸ ತಿರುವು ನೀಡಿವೆ. ಸಿನಿಮಾ ರಂಗದ ಗ್ಲಾಮರ್‌ನ ಹಿಂದೆ ಅಡಗಿರುವ ಇಂತಹ ಕಹಿ ಸತ್ಯಗಳ ಬಗ್ಗೆ ಶಬಾನಾ ನೀಡಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net