ನನ್ನನ್ನು ಜೈಲಿಗೆ ಕಳುಹಿಸುವುದೇ ಅವರ ಉದ್ದೇಶವಾಗಿತ್ತು: ದೂರುದಾರನ ವಿರುದ್ಧ ರಾಜ್​ಪಾಲ್​ ಹೊಸ ಆರೋಪ | Rajpal Yadav

ಬಾಲಿವುಡ್​ ಹಾಸ್ಯನಟ ರಾಜ್​ಪಾಲ್​ ಯಾದವ್​
ಬಾಲಿವುಡ್​ ಹಾಸ್ಯನಟ ರಾಜ್​ಪಾಲ್​ ಯಾದವ್​
Published on

ಪ್ರಮುಖ ಮುಖ್ಯಾಂಶಗಳು

  • ರಾಜ್​ಪಾಲ್​ ಯಾದವ್​ ಆರ್ಥಿಕ ವಂಚನೆ ಪ್ರಕರಣ
  • ನನ್ನನ್ನು ಜೈಲಿಗೆ ಕಳುಹಿಸಿದ್ದು ಒಂದು ಪ್ರಕಾರದ ಸಂಚು: ರಾಜ್​ಪಾಲ್​
  • ನಾನು 7 ವರ್ಷದಲ್ಲಿ 1200 ಕೋಟಿ ಗಳಿಸಲಿದ್ದೇನೆ
ಮುಂಬೈ: ಕೆಲ ತಿಂಗಳಿನಿಂದ ತಮ್ಮ ಅಭಿನಯದ ಬದಲಾಗಿ ಆರ್ಥಿಕ ವಂಚನೆ ಪ್ರಕರಣದಲ್ಲಿ ಸಿಲುಕಿ ಸುದ್ದಿಯಲ್ಲಿದ್ದ ಬಾಲಿವುಡ್​ ಹಾಸ್ಯನಟ ರಾಜ್​ಪಾಲ್​ ಯಾದವ್​ (Rajpal Yadav) ಈಗ ಪತ್ರಿಕಾಗೋಷ್ಠಿಯೊಂದರಲ್ಲಿ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ತಮ್ಮ ಮೇಲೆ ಮಾಡಲಾದ ಆರ್ಥಿಕ ವಂಚಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಜ್​ಪಾಲ್​​, ಅತಾ ಪತಾ ಲಾಪತಾ ಸಿನಿಮಾಗಾಗಿ 9 ಕೋಟಿ ಸಾಲ ಪಡೆದಿದ್ದು ಹೌದು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು 2018 ರಲ್ಲಿ ನನ್ನ ಆಸ್ತಿ ಪತ್ರವನ್ನು ನೀಡಿ ಸಾಲ ಮರುಪಾವತಿಸಲು ಹೋಗಿದ್ದಾಗ ಅದಕ್ಕೆ ದೂರುದಾರರು ಒಪ್ಪಲಿಲ್ಲ.
ದೂರುದಾರ ಮಾಧವ್ ಅಗರ್ವಾಲ್ ಅವರಿಗೆ ಅವರ ಹಣವನ್ನು ಮರಳಿ ಪಡೆಯುವುದಕ್ಕಿಂತ ನನ್ನನ್ನು ಜೈಲಿಗೆ ಕಳುಹಿಸುವುದೇ ಉದ್ದೇಶವಾಗಿತ್ತು ಎಂದು ರಾಜ್​ಪಾಲ್​ ಆರೋಪಿಸಿದ್ದಾರೆ. ಇದು ಕೇವಲ ಹಣದ ವ್ಯವಹಾರವಲ್ಲ, ಬದಲಾಗಿ ನಟನ ಪ್ರತಿಷ್ಠೆಗೆ ಧಕ್ಕೆ ತರುವ ವ್ಯವಸ್ಥಿತ ಸಂಚು ಎಂದು ರಾಜ್​ಪಾಲ್​ ಅವರ ವಕೀಲರ ತಂಡ ಕಿಡಿಕಾರಿದೆ.

ಮುಂದಿನ 7 ವರ್ಷದಲ್ಲಿ 1,200 ಕೋಟಿ ಗಳಿಸಲಿದ್ದೇನೆ!

ಕಾನೂನು ಸಂಕಷ್ಟಗಳ ನಡುವೆಯೂ ರಾಜ್‌ಪಾಲ್ ಯಾದವ್ ಅವರ ವೃತ್ತಿಜೀವನ ಮಾತ್ರ ರಾಕೆಟ್ ವೇಗದಲ್ಲಿ ಸಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ತಮ್ಮ ಭವಿಷ್ಯದ ಬಗ್ಗೆ ಮಾತನಾಡಿದ ಅವರು, ಮುಂದಿನ 7 ವರ್ಷಗಳಲ್ಲಿ ನನ್ನ ಬಳಿ 1,200 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳಿವೆ. ಈಗಾಗಲೇ 4 ದೊಡ್ಡ ಒಪ್ಪಂದಗಳಿಗೆ ಸಹಿ ಮಾಡಿದ್ದೇನೆ. ಇದರಲ್ಲಿ ಕೆಲವು ಯೋಜನೆಗಳು 2,000 ಕೋಟಿ ರೂ.ಗಳವರೆಗೆ ತಲುಪಲಿವೆ ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, 10 ದೊಡ್ಡ ಚಲನಚಿತ್ರಗಳು ಸಾಲಿನಲ್ಲಿವೆ ಎಂದು ಹೇಳುವ ಮೂಲಕ ತಾವು ಈಗಲೂ ಆರ್ಥಿಕವಾಗಿ ಸಬಲರಾಗಿರುವುದಾಗಿ ಸಾಬೀತುಪಡಿಸಿದ್ದಾರೆ.
ಮಕ್ಕಳ ಪಿಗ್ಗಿ ಬ್ಯಾಂಕ್‌ನಿಂದ ಹರಿದುಬಂದ ಹಣ: ಭಾವುಕರಾದ ನಟ
ಕಷ್ಟದ ಸಮಯದಲ್ಲಿ ದೇಶದ ಜನತೆ ತೋರಿದ ಪ್ರೀತಿಯನ್ನು ನೆನೆದು ರಾಜ್‌ಪಾಲ್ ಭಾವುಕರಾದರು. ಕಳೆದ 20 ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಕೋಟ್ಯಂತರ ರೂಪಾಯಿ ನೆರವು ಹರಿದುಬಂದಿದೆ. ಆಶ್ಚರ್ಯವೆಂದರೆ, ಪುಟ್ಟ ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್‌ನಲ್ಲಿ ಉಳಿಸಿದ್ದ ಹಣವನ್ನು ನನಗಾಗಿ ನೀಡಿದ್ದಾರೆ. ಅವರ ಈ ಋಣವನ್ನು ನಾನು ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು. ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಅವರು, ದಾನ ನೀಡಿದವರು ತಮ್ಮ ಬ್ಯಾಂಕ್ ವಿವರ ಕಳುಹಿಸಿದರೆ ಖಂಡಿತವಾಗಿಯೂ ಹಣವನ್ನು ಮರುಪಾವತಿಸುವುದಾಗಿ ಭರವಸೆ ನೀಡಿದ್ದಾರೆ.

ಮತ್ತೆ ನಗಿಸಲು ರೆಡಿಯಾದ ಕಾಮೆಡಿ ಕಿಂಗ್​

ರಾಜ್‌ಪಾಲ್ ಯಾದವ್​ ಅವರಿಗೆ ಸದ್ಯ ಮಧ್ಯಂತರ ಜಾಮೀನು ದೊರೆತಿದ್ದು, ಈ ಪ್ರಕರಣಗಳ ಮುಕ್ತಾಯವಾದ ಬಳಿಕ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲು ಕಾಮೆಡಿ ಕಿಂಗ್​ ರೆಡಿಯಾಗಿದ್ದಾರೆ. ಹಾಗೆಯೇ ಈಗಾಗಲೇ ಚಿತ್ರೀಕರಣ ಪೂರ್ಣವಾಗಿರುವ ಸಾಲು-ಸಾಲು ಸಿನಿಮಾಗಳು ಬಿಡುಗಡೆಗೆ ತುದುಗಾಲಲ್ಲಿ ನಿಂತಿದೆ.
ಅಕ್ಷಯ್ ಕುಮಾರ್ ಜೊತೆಗಿನ ಈ ಹಾರರ್ ಕಾಮಿಡಿ ಚಿತ್ರ ಭೂತ್ ಬಾಂಗ್ಲಾ ಏಪ್ರಿಲ್ 10 ರಂದು ತೆರೆಕಾಣಲಿದೆ. ಸುನೀಲ್ ಶೆಟ್ಟಿ ಮತ್ತು ಸಂಜಯ್ ದತ್ ಅವರಂತಹ ತಾರಾಗಣವಿರುವ ವೆಲ್‌ಕಮ್ ಟು ದಿ ಜಂಗಲ್ ಸಿನಿಮಾ ಜೂನ್ 26 ರಂದು ಬಿಡುಗಡೆಯಾಗಲಿದೆ.
ಒಟ್ಟಿನಲ್ಲಿ, ಕಾನೂನು ಸಮರದ ಜೊತೆಗೇ ವೃತ್ತಿಜೀವನದ ಅತಿ ದೊಡ್ಡ ಇನ್ನಿಂಗ್ಸ್ ಆರಂಭಿಸಲು ರಾಜ್‌ಪಾಲ್ ಯಾದವ್ ಸನ್ನದ್ಧರಾಗಿದ್ದಾರೆ. ಅವರ ಈ ಫೀನಿಕ್ಸ್ ಹಕ್ಕಿಯಂತಹ ಹಾರಾಟಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net