

ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ( Salman Khan ) ಹೆಸರು ಕೇಳಿದರೆ ಸಾಕು, ಅಭಿಮಾನಿಗಳಲ್ಲಿ ಒಂದು ವಿಶೇಷ ಸಂಭ್ರಮ. ಅವರ ವಿಶಿಷ್ಟ ಅಭಿನಯ, ಆಕರ್ಷಕ ವ್ಯಕ್ತಿತ್ವ ಮತ್ತು ತೆರೆಯ ಮೇಲಿನ ಸೂಪರ್ ಸ್ಟೈಲಿಶ್ ಅವತಾರಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದೀಗ ಅವರ ಬಹುನಿರೀಕ್ಷಿತ ಮಾತೃಭೂಮಿ ಮೇ ವಾರ್ ರೆಸ್ಟ್ ಇನ್ ಪೀಸ್ ಚಿತ್ರದ ಹೊಸ ಹಾಡೊಂದು ಅಭಿಮಾನಿಗಳ ಗಮನ ಸೆಳೆದಿದೆ. ಅದಕ್ಕೆ ಕಾರಣ, ಈ ಬಾರಿ ಸಲ್ಮಾನ್ ಖಾನ್ ನಟನೆಯ ಜತೆಗೆ ಗಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ.
ಹೌದು, ತೆರಿ ಸೆಕ್ಸಿ ಬ್ಯೂಟಿ ಎಂಬ ಹೊಸ ಹಾಡಿಗೆ ಸಲ್ಮಾನ್ ಖಾನ್ ತಮ್ಮ ಧ್ವನಿ ನೀಡಿದ್ದಾರೆ. ಬರೋಬ್ಬರಿ 11 ವರ್ಷಗಳ ಬಳಿಕ ಅವರು ಮತ್ತೆ ಹಿನ್ನೆಲೆ ಗಾಯನಕ್ಕೆ ಮರಳಿರುವುದು ಈ ಹಾಡಿನ ವಿಶೇಷ. ಅಂದಹಾಗೆ, ಸಲ್ಮಾನ್ ಖಾನ್ ಕೊನೆಯದಾಗಿ 2025ರಲ್ಲಿ ಬಿಡುಗಡೆಯಾದ ಸಿಕಂದರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿರುವ ನಡುವೆಯೇ ಈ ಹಾಡಿನ ಮೂಲಕ ಮತ್ತೊಂದು ಅಚ್ಚರಿ ನೀಡಿದ್ದಾರೆ.
ಸಲ್ಮಾನ್ ಖಾನ್ ಈ ಹಿಂದೆ ಕಿಕ್ ಚಿತ್ರದ ಹ್ಯಾಂಗೋವರ್ (2014) ಮತ್ತು ಹೀರೋ ಚಿತ್ರದ ಮೈ ಹೂಂ ಹೀರೋ ತೇರಾ (2015) ಸೇರಿದಂತೆ ಹಲವು ಹಾಡುಗಳಿಗೆ ಧ್ವನಿಯಾಗಿದ್ದರು. ಇದೀಗ ತೆರಿ ಸೆಕ್ಸಿ ಬ್ಯೂಟಿ ಮೂಲಕ ಸುಮಾರು 11 ವರ್ಷಗಳ ನಂತರ ಮತ್ತೆ ಹಿನ್ನೆಲೆ ಗಾಯನಕ್ಕೆ ಮರಳಿದ್ದಾರೆ.
ಈ ಹಾಡಿನ ಆರಂಭದಲ್ಲೇ ನಟಿ ಚಿತ್ರಂಗದಾ ಸಿಂಗ್ ಕೆಂಪು ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಕೈಯಲ್ಲಿ ಗಿಟಾರ್ ಹಿಡಿದು ಸಲ್ಮಾನ್ ಖಾನ್ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ವಿಮಾನಗಳ ಹ್ಯಾಂಗರ್ ಹಿನ್ನೆಲೆಯಲ್ಲಿರುವ ಹಾಡಿನಲ್ಲಿ ಪ್ರಣಯ, ನೃತ್ಯ ಮತ್ತು ಮನರಂಜನೆಯ ಅಂಶಗಳು ಬೆರೆತಿವೆ. ಚುರುಕಿನ ಸಂಗೀತಕ್ಕೆ ತಕ್ಕಂತೆ ಹಾಡಿನ ದೃಶ್ಯಗಳನ್ನು ರೂಪಿಸಲಾಗಿದೆ. ಈ ಹಾಡಿಗೆ ಸಾಜಿದ್ ಖಾನ್ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಮುಸ್ಕಾನ್ ಮಹಿಳಾ ಧ್ವನಿಯಲ್ಲಿ ಹಾಡಿಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಈ ಹಾಡು ಇಂದು (ನ.04) ಬಿಡುಗಡೆಯಾಗಿದೆ.
ಇನ್ನು ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾಗಳ ಬಗ್ಗೆಯೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಅವರು ನಟಿಸಲಿದ್ದು, ಈ ಚಿತ್ರಕ್ಕೆ ಮಾನ್‌ಸ್ಟರ್ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ. ನಯನತಾರಾ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷದ ಈದ್ ಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ, ( ಏಜೇನ್ಸೀಸ್).