

ನಟ, ನಿರ್ಮಾಪಕ ತುಷಾರ್ ಕಪೂರ್ ನಂತರ ಆಯುಷ್ಮಾನ್ ಖುರಾನಗೂ ಬಂತು ಬೆದರಿಕೆ ಕರೆ.
ಬಿಷ್ಣೋಯ್ ಗ್ಯಾಂಗ್ನೊಂದಿಗೆ ನಂಟಿದೆ ಎಂದು ಹೇಳಿಕೊಂಡ ವ್ಯಕ್ತಿಯಿಂದ ಕೋಟ್ಯಾಂತರ ರೂ.ಗೆ ಬೇಡಿಕೆ.
ನಕಲಿ ಕರೆ ಇರಬಹುದು...ಹಣಕ್ಕಾಗಿ ಈ ಕೃತ್ಯಕ್ಕೆ ಕೈ ಹಾಕಿರಬಹುದು ಎಂದ ಮುಂಬೈ ಪೊಲೀಸರು.
Ayushmann Khurrana: ಬಾಲಿವುಡ್ನ ಖ್ಯಾತ ನಟ ಮತ್ತು ನಿರ್ಮಾಪಕ ತುಷಾರ್ ಕಪೂರ್ ನಂತರ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಬಂಧ ಇದೆ ಎನ್ನಲಾದ ಅಪರಿಚಿತ ವ್ಯಕ್ತಿಯೊಬ್ಬನಿಂದ, ನಟ ಆಯುಷ್ಮಾನ್ ಖುರಾನ ಅವರಿಗೂ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಜೊತೆಗೆ ಕೋಟ್ಯಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ ಎನ್ನುವ ಮಾಹಿತಿಯೂ ಇದೆ.
ಮುಂಬೈ ಪೊಲೀಸರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ನೊಂದಿಗೆ ನಂಟು ಹೊಂದಿರುವ ವ್ಯಕ್ತಿಯಿಂದ ಆಡಿಯೋ ಸಂದೇಶವೊಂದು ಬಂದಿದೆ. ಇದರಲ್ಲಿ ನಟನ ಬಳಿ ಕೋಟ್ಯಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಆತ ಯಾರು?, ಏನು? ಎನ್ನುವ ಬಗ್ಗೆ ತನಿಖೆ ಮುಂದುವರೆಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಆಡಿಯೋ ಕ್ಲಿಪ್ ಬಂದಿರುವುದು ನಿಜ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ. ನಟನಿಗೆ ಬೆದರಿಕೆ ಹಾಕಿ ಕಳುಹಿಸಿರುವ ಆಡಿಯೋ ಕ್ಲಿಪ್ನಲ್ಲಿರುವ ಆರೋಪಿ ಹೆಸರು ನಮ್ಮ ದಾಖಲೆಗಳಲ್ಲಿ ಇಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಇದು ನಕಲಿಯೂ ಆಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ ಮುಂಬೈ ಪೊಲೀಸರು.
ಕೆಲವು ದಿನಗಳ ಹಿಂದೆ ನಟ ತುಷಾರ್ ಕಪೂರ್ ಅವರಿಗೆ ಕೋಟ್ಯಾಂತರ ರೂಪಾಯಿ ಬೇಡಿಕೆ ಇಟ್ಟಿರುವ ಜೀವ ಬೆದರಿಕೆ ಕರೆ ಬಂದಿತ್ತು, ಆರೋಪಿ ತನ್ನ ಹೆಸರನ್ನು ಹ್ಯಾರಿ ಬಕ್ಸರ್ ಎಂದು ಹೇಳಿಕೊಂಡಿದ್ದ. ನಟನಿಗೆ ಹೆದರಿಸಿ ಐದು ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ನಟ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸರು ನಟನಿಗೆ ಬಂದ ಕರೆಯು ಮತ್ತು ಹ್ಯಾರಿ ಬಕ್ಸರ್ ಧ್ವನಿ ಹಾಗೂ ನಿಜವಾದ ಗ್ಯಾಂಗ್ಸ್ಟರ್ ಹ್ಯಾರಿ ಬಕ್ಸರ್ ಧ್ವನಿಯನ್ನು ತಾಳೆ ಮಾಡಿ ನೋಡಿದಾಗ ಮ್ಯಾಚ್ ಆಗಿಲ್ಲ. ಅಪರಿಚಿತ ವ್ಯಕ್ತಿ ನಟನಿಂದ ಹಣ ವಸೂಲಿ ಮಾಡಲು ಇಂತಹ ಕೃತ್ಯಕ್ಕೆ ಕೈ ಹಾಕಿರಬಹುದು ಎಂದು ಪೊಲೀಸರು ಅಂದಾಜಿಸಿದರು. ಸದ್ಯ ಆಯುಷ್ಮಾನ್ ಖುರಾನ ಅವರಿಗೆ ಬಂದಿರುವ ಧ್ವನಿ ಹಾಗೂ ತುಷಾರ್ ಅವರಿಗೆ ಕಳುಹಿಸಿರುವ ಧ್ವನಿ ತಾಳೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಮುಂಬೈನ ಫುಟ್ಬಾಲ್ ಗ್ರೌಂಡ್ನಿಂದ ಕಾರಿನಲ್ಲಿ ಹೊರ ಬರುತ್ತಿದ್ದ ನಟ ಟೈಗರ್ ಶ್ರಾಫ್ ಮೇಲೆ ಬಿಷ್ಣೋಯ್ ಗ್ಯಾಂಗ್ ಗುಂಡಿನ ದಾಳಿ ಮಾಡಿತ್ತು. ಅವರು ಸಲ್ಮಾನ್ ಖಾನ್ ಅವರನ್ನು ಹೊಗಳಿದ್ದು, ಅವರೊಂದಿಗೆ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣ ಎನ್ನುವ ಚರ್ಚೆಗಳು ಮುನ್ನೆಲೆಗೆ ಬಂದಿತ್ತು. ಸಲ್ಮಾನ್ ಖಾನ್ ಅವರೊಂದಿಗೆ ಆತ್ಮೀಯವಾಗಿ ಇರುವ ಪ್ರತಿ ಬಾಲಿವುಡ್ ನಟರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತದೆ ಎನ್ನುವ ವಿಚಾರವೂ ಹೊರಬಂದಿತ್ತು. ಸದ್ಯ ಈ ಹೇಳಿಕೆಗಳನ್ನು ಬಳಸಿಕೊಂಡು ಹಣದಾಸೆಗೆ ಕಿಡಿಗೇಡಿಗಳು ಸುಳ್ಳು ಬೆದರಿಕೆ ಹಾಕುತ್ತಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್).