ಭಾರತ ಇಂದಿಗೂ ಪುರುಷ ಪ್ರಧಾನ: ಸಂಗೀತ ಲೋಕದ ಕಹಿ ಸತ್ಯ ಬಿಚ್ಚಿಟ್ಟ ಗಾಯಕಿ ಶ್ರೇಯಾ ಘೋಷಾಲ್! Shreya Ghoshal

ಶ್ರೇಯಾ ಘೋಷಾಲ್ (Shreya Ghoshal)
ಶ್ರೇಯಾ ಘೋಷಾಲ್ (Shreya Ghoshal)
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​. 8 ವಿಶ್ವ ಮಹಿಳೆಯರ ದಿನ
  • ಭಾರತೀಯ ಸಂಗೀತ ಕ್ಷೇತ್ರದ ಕಹಿ ಸತ್ಯ ಬಿಚ್ಚಿಟ್ಟ ಶ್ರೇಯಾ ಘೋಷಾಲ್
  • ಸಂಗೀತ ಲೋಕ ಇಂದಿಗೂ ಪುರುಷ ಪ್ರಧಾನವಾಗಿದೆ
ಮುಂಬೈ: ಇಂದು (ಮಾ.8) ಪ್ರಪಂಚದಾದ್ಯಂತ ವಿಶ್ವ ಮಹಿಳೆಯರ ದಿನವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಭಾರತದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಇತ್ತೀಚೆಗೆ ನೀಡಿರುವ ಹೇಳಿಕೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ರಾಜ್​ ಶಮಾನಿ ಅವರ ಪಾಡ್​ಕಾಸ್ಟ್​​ವೊಂದರಲ್ಲಿ ಭಾಗವಹಿಸಿದ್ದ ಶ್ರೇಯಾ ಘೋಷಾಲ್ ತನ್ನ 20 ವರ್ಷಗಳ ಹಿನ್ನಲೆ ಗಾಯನ ಮತ್ತು ಭಾರತದಲ್ಲಿ ಸಂಗೀತ ಕ್ಷೇತ್ರ ಹೇಗಿದೆ ಎಂಬುದರ ಕುರಿತು ಸುಧೀರ್ಘವಾಗಿ ಮಾತನಾಡಿದರು.

ಭಾರತ ಇವತ್ತೀಗೂ ಪುರುಷ ಪ್ರಧಾನವಾಗಿದೆ!

ವಿಶ್ವದ ಖ್ಯಾತ ಮಹಿಳಾ ಗಾಯಕಿಯರ ಬಗ್ಗೆ ಮಾತನಾಡುತ್ತಾ ರಾಜ್ ಶಮಾನಿ, ಜಾಗತಿಕ ಮಟ್ಟದಲ್ಲಿ ಟೇಲರ್​ ಶಿಫ್ಟ್​ ಮತ್ತು ರಿಹಾನಾ ಇವರು ಅಗ್ರಗಣ್ಯ ಗಾಯಕಿಯರ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಈ ಬೆಳವಣಿಗೆಯನ್ನು ನಾವು ಯಾವಾಗ ನೋಡಬಹುದು ಎಂದು ಕೇಳಿದರು.
ಈ ಪ್ರಶ್ನೆಗೆ ಉತ್ತರಿಸಿದ ಶ್ರೇಯಾ ಘೋಷಾಲ್, ನೋಡಿ ರಾಜ್​ ಭಾರತದ ಇವತ್ತೀಗೂ ಪುರುಷ ಪ್ರಧಾನ ಸಮಾಜವಾಗಿದೆ. ಇದಕ್ಕೆ ಸಂಗೀತ ಕ್ಷೇತ್ರವೇನು ಹೊರತಲ್ಲ. ಭಾರತದ ಅತ್ಯುತ್ತಮ 50 ಸಂಗೀತಗಾರರ ಪಟ್ಟಿಯನ್ನು ನೀವು ನೋಡಿದರೆ ಅದರಲ್ಲಿ ಕೇವಲ 7-8 ಜನ ಮಾತ್ರ ಮಹಿಳೆಯರಿದ್ದಾರೆ, ಉಳಿದೆಲ್ಲಾ ಸ್ಥಾನದಲ್ಲಿ ಪುರುಷರೇ ಇದ್ದಾರೆ ಎಂದು ಹೇಳಿದರು.
ಆದರೆ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ರೀತಿಯ ಗಾಯನದ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವ ಜೊತೆಗೆ, ಈ ಕ್ಷೇತ್ರದಲ್ಲಿ ತಮ್ಮದೇ ಆದ ಒಂದು ಹಿಡಿತವನ್ನು ಅವರು ಹೊಂದಿದ್ದರು. ಅದು ಇಗೊಂದು 10 ವರ್ಷದಲ್ಲಿ ಕಡಿಮೆಯಾಗುತ್ತಾ ಬಂದಿದೆ. ಆದರೆ ಮುಂದೊಂದು ದಿನ ಖಂಡಿತವಾಗಿ ಮಹಿಳೆಯರು ಪುರುಷರ ಸರಿಸಮಾನವಾಗಿ ಬೆಳೆಯುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಅವರು ಉತ್ತರಿಸಿದ್ದಾರೆ.

ಶ್ರೇಯಾ ಘೋಷಾಲ್ ಬಗ್ಗೆ

ಶ್ರೇಯಾ ಘೋಷಾಲ್ ಅವರು ಮಾರ್ಚ್ 12, 1984 ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಜನಿಸಿದರು. ಕೇವಲ ನಾಲ್ಕು ವರ್ಷದವರಿದ್ದಾಗಲೇ ಸಂಗೀತ ಕಲಿಯಲು ಆರಂಭಿಸಿದ ಇವರು, ಜೀ ಟಿವಿಯ ಪ್ರಸಿದ್ಧ ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದರು.
2002ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ದೇವದಾಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಶ್ರೇಯಾ, ತಮ್ಮ ಮೊದಲ ಚಿತ್ರದ ಹಾಡಿಗೇ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅಂದಿನಿಂದ ಇಂದಿನವರೆಗೆ ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಬಂಗಾಳಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಭಾರತದ ಅತ್ಯಂತ ಯಶಸ್ವಿ ಗಾಯಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅವರಿಗೆ ಈವರೆಗೆ 5 ರಾಷ್ಟ್ರ ಪ್ರಶಸ್ತಿಗಳು ಹಾಗೂ ಹಲವಾರು ಫಿಲ್ಮ್ ಫೇರ್ ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಚಿತ್ರರಂಗದಲ್ಲಿ ಶ್ರೇಯಾ ಘೋಷಾಲ್

2003ರಲ್ಲಿ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಇವರು, ಮುಂಗಾರು ಮಳೆ ಚಿತ್ರದ 'ಅರಳುತ್ತಿರು' ಮತ್ತು 'ಇವನು ಗೆಳೆಯನಲ್ಲ' ಹಾಡುಗಳ ಮೂಲಕ ಮನೆಮಾತಾದರು. ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಮತ್ತು ಮನೋ ಮೂರ್ತಿ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಅನೇಕ ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ. 'ಸಾಲುತ್ತಿಲ್ಲವೇ' (ಕೋಟಿಗೊಬ್ಬ 2), 'ಆಲೋಚನೆ' (ರೋಮಿಯೋ), 'ಗಗನವೇ ಬಾಗಿ' (ಸಂಜು ವೆಡ್ಸ್ ಗೀತಾ) ಮತ್ತು 'ಕಣ್ಣು ಹೊಡಿಯಾಕ' (ರಾಬರ್ಟ್) ಇವರ ಕೆಲವು ಜನಪ್ರಿಯ ಕನ್ನಡ ಗೀತೆಗಳಾಗಿವೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net