ಮುಂಬೈ: ಸಿನಿಮಾ ಪ್ರಿಯರು ಕಳೆದ ಹಲವು ಸಮಯದಲ್ಲಿ ಕಾಯುತ್ತಿದ್ದ ಅತಿ ದೊಡ್ಡ ಬಜೆಟ್ ಹಾಗೂ ಅತ್ಯಂತ ಹೆಚ್ಚಿನ ನೀರಿಕ್ಷೆಯಿಟ್ಟಿರುವ ಪೌರಾಣಿಕ ಸಿನಿಮಾ ಭಾಗ 1 ರ ಟ್ರೇಲರ್ (Ramayan Trailer Controversy) ಗುರುವಾರ (ಜು.30) ಮುಂಜಾನೆ 4.00 ಕ್ಕೆ ಬಿಡುಗಡೆಯಾಗಿದೆ.
ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ರಾಕಿಂಗ್ ಸ್ಟಾರ್ ಯಶ್ ಮೇಲೆ ಲೆಕ್ಕಕ್ಕೆ ನಿಲುಕದ ನೀರಿಕ್ಷೆಯನ್ನು ಸಿನಿ ಪ್ರೇಕ್ಷಕರು ಹೊಂದಿದ್ದಾರೆ. ಹಾಗೂ ಈ ಟ್ರೇಲರ್ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರವೆಂದು ನಂಬಲಾಗುವ 'ಬ್ರಹ್ಮ ಮುಹೂರ್ತ' ದ ಸಮಯದಲ್ಲಿ (ಬೆಳಿಗ್ಗೆ 4:00 ಗಂಟೆಗೆ) ರಿಲೀಸ್ ಮಾಡಿ ಚಿತ್ರತಂಡ ಹೊಸ ಇತಿಹಾಸ ಸೃಷ್ಟಿಸಿದೆ.
ಸಿನಿಮಾದ ದೃಶ್ಯ ವೈಭವ ಮತ್ತು ಗ್ರಾಫಿಕ್ಸ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ, ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪಾತ್ರಧಾರಿಗಳ ವೇಶಭೂಷಣದ ಕುರಿತು ನೆಟ್ಟಿಗರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದ್ದು, ಸೋಷಿಯಲ್ ಮೀಡಿಯಾನಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ.
ತ್ರೇತಾಯುಗದ ಕಥೆಗೆ ಮಾಡರ್ನ್ ಲುಕ್?
ರಾಮಾಯಣ ಮಹಾಕಾವ್ಯವು 'ತ್ರೇತಾಯುಗ'ದಲ್ಲಿ ನಡೆದ ಕಥೆಯಾಗಿದೆ. ಆದರೆ ಈ ಸಿನಿಮಾದಲ್ಲಿ ನಟಿಯರ ವೇಷಭೂಷಣಗಳು ತುಂಬಾ ಮಾಡರ್ನ್ ಆಗಿವೆ, ಇಂದಿನ ಕಾಲದ ಫ್ಯಾಷನ್ ತರ ಇದೆ ಎಂದು ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ. ಪ್ರಾಚೀನ ಕಾಲದ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ನಿರ್ದೇಶಕರು ಮತ್ತು ಕಾಸ್ಟ್ಯೂಮ್ ಡಿಸೈನರ್ಗಳು ಎಡವಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಲಾರಾ ದತ್ತಾ ಮತ್ತು ಸಾಯಿ ಪಲ್ಲವಿ ವಿರುದ್ಧ ಟೀಕೆ!
ಈ ವೇಷಭೂಷಣದ ಚರ್ಚೆಗೆ ಮುಖ್ಯವಾಗಿ ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಾರಾ ದತ್ತಾ ಅರ್ಧ ತೋಳಿನ ಬ್ಲೌಸ್ ಧರಿಸಿರುವುದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಅಲ್ಲದೆ ಕೇಶ ವಿನ್ಯಾಸ ಕೂಡ ಪೌರಾಣಿಕದ ಬದಲು ಮಾಡರ್ನ್ ಲುಕ್ನಲ್ಲಿದೆ ಎಂದು ಕಿಡಿಕಾರುತ್ತಿದ್ದಾರೆ.
ಇನ್ನೊಂದೆಡೆ ಸೀತಾ ಮಾತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಯಿ ಪಲ್ಲವಿ ಅವರ, ಸರಳತೆ, ನಯ-ವಿನಯ ಜನರ ಮೆಚ್ಚುಗೆಗೆ ಪಾತ್ರವಾದರೆ, ಇವರೂ ಕೂಡ ಆಧುನಿಕ ಶೈಲಿಯ ಸೀರೆ, ಬ್ಲೌಸ್ ಹಾಗೂ ಕೇಶ ವಿನ್ಯಾಸವನ್ನು ಹೊಂದಿರುವ ಕಾರಣ ಜನರು ಈ ಸಿನಿಮಾದಲ್ಲಿ ನೈಜತೆಯಿಲ್ಲ ಎಂದು ಜನರಿಯುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ
ಒಂದೆಡೆ ಚಿತ್ರದ ಮೇಕಿಂಗ್, ರಾಮ-ರಾವಣರ ನಡುವಿನ ಸಂಘರ್ಷವನ್ನು ತೋರಿಸುವ ದೃಶ್ಯಗಳು ಮತ್ತು ಬ್ರಹ್ಮ ಮುಹೂರ್ತದ ಟ್ರೇಲರ್ ಲಾಂಚ್ ಎಲ್ಲರಿಗೂ ಸಖತ್ ಇಷ್ಟವಾಗಿದೆ. ಆದರೆ ಇನ್ನೊಂದೆಡೆ, ಪೌರಾಣಿಕ ಚಿತ್ರಗಳಲ್ಲಿ ಇತಿಹಾಸಕ್ಕೆ ತಕ್ಕಂತೆ ವೇಷಭೂಷಣ, ಕೇಶ ವಿನ್ಯಾಸ ಇರಬೇಕು ಎಂಬುದು ಸಿನಿಪ್ರಿಯರ ವಾದವಾಗಿದೆ.
ಈ ವಿವಾದಗಳ ಹೊರತಾಗಿಯೂ, ಟ್ರೇಲರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಂಬರ್ 1 ಟ್ರೆಂಡಿಂಗ್ನಲ್ಲಿದೆ. ಬಾಕ್ಸ್ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಲು ಬರುತ್ತಿರುವ ಈ ಸಿನಿಮಾ ಮುಂದಿನ ದಿನಗಳಲ್ಲಿ ಯಾವೆಲ್ಲಾ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜನ್ಸೀಸ್).