

ಹೈದರಾಬಾದ್: ಬಾಲಿವುಡ್ ಹೀರೋ ಸೋನುಸೂದ್ ಹೈದರಾಬಾದ್ ನ ಕುಮಾರಿ ಫುಡ್ ಸ್ಟಾಲ್ಗೆ ಭೇಟಿ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದರು. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಟನ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿತ್ತಿದ್ದಾರೆ.
ಅಲ್ಲಿದ್ದ ಜನರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸೋನುಸೂದ್, ಮಾಲೀಕರಾದ ಕುಮಾರಿ ಅವರ ಬಳಿ ಬಂದು, ಇವತ್ತು ಸ್ಟಾಲ್ ನಲ್ಲಿ ಏನು ತಿಂಡಿ ಇದೆ ಎಂದು ಕೇಳಿದರು. ಆಗ ಕುಮಾರಿ ಅವರು, ವೆಜ್ 80 ರೂ., ನಾನ್ ವೆಜ್ 120ರೂ. ಎಂದರು. ಆಗ ಸೋನುಸೂದ್, ನಾನೊಬ್ಬ ಅಪ್ಪಟ ಸಸ್ಯಾಹಾರಿ ಹಾಗಾಗಿ ವೆಜ್ ಟೆಸ್ಟ್ ಮಾಡುತ್ತೇನೆ, ತನಗೆ ಏನಾದರೂ ರಿಯಾಯಿತಿ ಇದೆಯೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಕುಮಾರಿ, ನಿನಗೆ ಊಟ ಉಚಿತ ಎಂದು ಹೇಳಿದರು. ಆಗ ಅಲ್ಲಿದ್ದವರೆಲ್ಲ ಥಟ್ಟನೆ ನಕ್ಕರು.
ಸೋನುಸೂದ್ರನ್ನು ನೋಡುತ್ತಿದ್ದಂತೆ ಕುಮಾರಿ ಭಾವುಕರಾದರು. ಈ ಸಂದರ್ಭದಲ್ಲಿ ಮಾತನಾಡಿದ ಸೋನುಸೂದ್, ಕುಮಾರಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಸ್ವಯಂ ಉದ್ಯೋಗ ಕೈಗೊಂಡು ಎಲ್ಲರ ಕೃಪೆಗೆ ಪಾತ್ರರಾಗಿರುವುದಲ್ಲದೆ, ಹಲವಾರು ಮಂದಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದ್ದಾರೆ ಎಂದರು.
ಬಳಿಕ ಕುಮಾರಿ ಮಾತನಾಡಿ.. ಕರೋನಾ ಸಮಯದಲ್ಲಿ ಸೋನುಸೂದ್ ಸಾಕಷ್ಟು ಜನರಿಗೆ ಬೆಂಬಲ ನೀಡಿದ್ದಾರೆ. ನೀವು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದೀರಿ. ಅದಕ್ಕೆ ಪ್ರತಿಯಾಗಿ ನಾನು ಉಚಿತವಾಗಿ ಊಟ ನೀಡುತ್ತೇನೆ ಎಂದು ಕುಮಾರಿ ಭಾವುಕರಾದರು. ಸೋನುಸೂದ್ ಅವರು ಕುಮಾರಿ ಸ್ಟಾಲ್ ನಲ್ಲಿ ಫುಡ್ ಟೆಸ್ಟ್ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.