

ಬಾಲಿವುಡ್ ನಟ ಶಾರುಖ್ ಖಾನ್ ಇನ್ನು ಕೆಲವೇ ತಿಂಗಳುಗಳಲ್ಲಿ ವಿಜ್ಞಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಇದು ಕರೊನಾ ಇಫೆಕ್ಟ್ ಅಲ್ಲ. ಅಷ್ಟಕ್ಕೂ ಇದಕ್ಕೆ ಕಾರಣ ‘ಬ್ರಹ್ಮಾಸ್ತ್ರ’. ಅಂದರೆ ಬಹುನಿರೀಕ್ಷಿತ ಹಾಗೂ ಬಹುತಾರಾಗಣದ ಅದ್ದೂರಿ ಸಿನಿಮಾ ‘ಬ್ರಹ್ಮಾಸ್ತ್ರ’ದಲ್ಲಿ ಸೈಂಟಿಸ್ಟ್ ಆಗಿ ಶಾರುಖ್ ಖಾನ್ ನಟಿಸುತ್ತಿದ್ದಾರೆ.
ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಹಾಗೂ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಅಯನ್ ಮುಖರ್ಜಿ ನಿರ್ದೇಶನ ಮಾಡುತ್ತಿರುವ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್ ಹಾಗೂ ಅಕ್ಕಿನೇನಿ ನಾಗಾರ್ಜುನ್ ಮುಂತಾದ ಘಟಾನುಘಟಿಗಳು ಅಭಿನಯಿಸುತ್ತಿದ್ದಾರೆ. ಈ ತಾರಾಬಳಗಕ್ಕೆ ಶಾರುಖ್ ಕೂಡ ಸೇರಿಕೊಂಡಿದ್ದು, ಚಿತ್ರದ ಕುರಿತ ಕೌತುಕವನ್ನು ಹೆಚ್ಚಿಸಿದೆ. ಅಂದಹಾಗೆ, ಶಾರುಖ್ ಇದರಲ್ಲಿ ಅತಿಥಿ ಕಲಾವಿದರಾಗಿ ಪಾಲ್ಗೊಳ್ಳುತ್ತಿದ್ದು, ಅವರ ಅಭಿನಯದ ದೃಶ್ಯಗಳ ಚಿತ್ರೀಕರಣ ಕೂಡ ಮುಕ್ತಾಯಗೊಂಡಿದೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಶಾರುಖ್ ಅವರ ಪಾತ್ರದೊಂದಿಗೇ ಸಿನಿಮಾ ತೆರೆದುಕೊಳ್ಳಲಿದೆಯಂತೆ. ಅದೊಂದು ಸುದೀರ್ಘ ಸನ್ನಿವೇಶವಾಗಿದ್ದು, ಅದಕ್ಕಾಗಿ ಕೆಲವು ದಿನಗಳ ಹಿಂದೆಯೇ ಶೂಟಿಂಗ್ ಮಾಡಲಾಗಿದೆ ಎಂಬ ಮಾಹಿತಿ ಬಾಲಿವುಡ್ ವಲಯದಿಂದ ಕೇಳಿಬಂದಿದೆ. ನಾಗಾರ್ಜುನ್, ಶಾರುಖ್, ಡಿಂಪಲ್ ಕಪಾಡಿಯಾ ಅವರು ನಟಿಸಿರುವ ಪಾತ್ರಗಳು ಈ ಚಿತ್ರದ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎನ್ನಲಾಗಿದೆ. ಶಾರುಖ್ ಖಾನ್ 2018ರಲ್ಲಿ ತೆರೆ ಕಂಡಿದ್ದ ಜೀರೋ ಸಿನಿಮಾ ಬಳಿಕ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ಬ್ರಹ್ಮಾಸ್ತ್ರ ಹಿಡಿದಿರುವುದರಿಂದ ಅಭಿಮಾನಿಗಳಲ್ಲಿ ಸಂತಸ ಉಂಟಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಈ ಸಿನಿಮಾ ಇದೇ ವರ್ಷದ ಡಿಸೆಂಬರ್ನಲ್ಲಿ ತೆರೆ ಕಾಣಲಿದೆ. -ಏಜೆನ್ಸೀಸ್