

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಅರಬೈಲ್ ಘಟ್ಟದಲ್ಲಿ ಮಂಗಳವಾರ ಭೀಕರ ಅಪಘಾತ ಸಂಭವಿಸಿದೆ. ಬೊಲೆರೊ ವಾಹನಕ್ಕೆ ಎಡದಿಂದ ಒಂದು ಲಾರಿ, ಬಲದಿಂದ ಮತ್ತೊಂದು ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಲಾರಿ-ಟಿಪ್ಪರ್ ಮಧ್ಯೆ ಸಿಕ್ಕ ಬೊಲೆರೊ ನಜ್ಜುಗುಜ್ಜಾಗಿದೆ. ಈ ದೃಶ್ಯ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಬಾಗಲಕೋಟೆಯ ಲೋಕಾಪುರದ 8 ಜನರು ಬೊಲೆರೊದಲ್ಲಿ ಗೋಕರ್ಣ ಮತ್ತು ಧರ್ಮಸ್ಥಳಕ್ಕೆಂದು ಹೋಗುತ್ತಿದ್ದರು. ಈ ಪೈಕಿ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಹೊಸ ಬೊಲೆರೊ ಖರೀದಿಸಿದ್ದ ಕುಟುಂಬ ಕಾರಿಗೆ ಪೂಜೆ ಮಾಡಿಸಲೆಂದು ದೇವರ ಸನ್ನಿಧಿಗೆ ಹೋಗುತ್ತಿತ್ತು. ಮಾರ್ಗಮಧ್ಯೆ ಭೀಕರ ಅಪಘಾತವಾಗಿದ್ದು, ಕಾರಿನಲ್ಲಿದ್ದ ಭಾಗ್ಯಶ್ರೀ(35) ಮತ್ತು ಚಿಕ್ಕಮ್ಮ (28) ಮೃತಪಟ್ಟಿದ್ದಾರೆ.