ಟೇಕಾಫ್​ ಆಗುವಷ್ಟರಲ್ಲಿ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ಎದ್ನೋಬಿದ್ನೋ ಅಂತ ಓಡಿದ ಪ್ರಯಾಣಿಕರು! Boeing Plane

Boeing Plane
Published on

Boeing Plane : ಲ್ಯಾಂಡಿಂಗ್ ಗೇರ್ ವೈಫಲ್ಯದಿಂದಾಗಿ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡ ಕಾರಣ ಅಮೆರಿಕನ್ ಏರ್​ಲೈನ್ಸ್​ ವಿಮಾನವೊಂದು ಟೇಕಾಫ್​ ಅನ್ನು ಸ್ಥಗಿತಗೊಳಿಸಿದ ಘಟನೆ ಕೊಲೊರಾಡೋ ರಾಜ್ಯದ ಡೆನ್ವರ್​ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ವಿಮಾನವು ಡೆನ್ವರ್ ವಿಮಾನ ನಿಲ್ದಾಣದಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ಸ್ಥಳೀಯ ಸಮಯ ಬೆಳಗಿನ ಜಾವ 2.45ಕ್ಕೆ ಈ ಘಟನೆ ಸಂಭವಿಸಿದೆ. ಮಿಯಾಮಿಗೆ ತೆರಳುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ AA-3023 ಈ ಸಮಸ್ಯೆಗೆ ಒಳಗಾಗಿದೆ. ಈ ಘಟನೆ ಬೆನ್ನಲ್ಲೇ ವಿಮಾನದಲ್ಲಿದ್ದ ಎಲ್ಲಾ 173 ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಅಪಘಾತದಲ್ಲಿ ಒಬ್ಬ ವ್ಯಕ್ತಿ ಮಾತ್ರ ಸ್ವಲ್ಪ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಿಂದ ಬೆಂಕಿ ಮತ್ತು ಹೊಗೆ ಹೊರಬರುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಘಟನೆಯ ಬಗ್ಗೆ ತನಿಖೆ ಆರಂಭಿಸಿರುವುದಾಗಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.

ವಿಮಾನ ರನ್‌ವೇಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಡೆನ್ವರ್ ಅಗ್ನಿಶಾಮಕ ಇಲಾಖೆ ತಕ್ಷಣ ಪ್ರತಿಕ್ರಿಯಿಸಿವೆ ಎಂದು ಡೆನ್ವರ್ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಥಳೀಯ ಸಮಯ ಬೆಳಗ್ಗೆ 5.10ರ ಹೊತ್ತಿಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ಡೆನ್ವರ್ ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಕಳೆದ ಐದು ತಿಂಗಳಲ್ಲಿ ಡೆನ್ವರ್ ವಿಮಾನ ನಿಲ್ದಾಣದಲ್ಲಿ ವಿಮಾನ ಬೆಂಕಿ ಕಾಣಿಸಿಕೊಂಡ ಎರಡನೇ ಘಟನೆ ಇದಾಗಿದೆ. ಕಳೆದ ಮಾರ್ಚ್‌ನಲ್ಲಿ, ಡಲ್ಲಾಸ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಬೋಯಿಂಗ್ 737-800 ವಿಮಾನವು ವಿಮಾನ ನಿಲ್ದಾಣದಲ್ಲಿ ಬೆಂಕಿಗೆ ಆಹುತಿಯಾಯಿತು. ವಿಮಾನದಲ್ಲಿದ್ದ ಎಲ್ಲಾ 172 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net