

ನವದೆಹಲಿ: ಬೊಲಿವಿಯಾದಲ್ಲಿ ರಸ್ತೆಯ ತುಂಬೆಲ್ಲ ಶವಗಳು ಪತ್ತೆಯಾಗುತ್ತಿವೆ. ಪತ್ತೆಯಾಗಿರುವ ಶವಗಳ ಪೈಕಿ ಶೇ.85ಕ್ಕೂ ಹೆಚ್ಚು ಸಾವು ಕೋವಿಡ್-19 ಸೋಂಕಿನಿಂದ ಸಂಭವಿಸಿರುವುದು ಪತ್ತೆಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೊಲಿವಿಯಾದ ಪೊಲೀಸರು 5 ದಿನಗಳ ಅವಧಿಯಲ್ಲಿ ಒಟ್ಟು 400ಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ. ಕೂಚಂಬಾಂಬಾ ಒಂದರಲ್ಲೇ 191 ಶವಗಳು ಹಾಗೂ ಲಾ ಪಾಜ್ನಲ್ಲಿ 141 ಶವಗಳು ರಸ್ತೆಯಲ್ಲಿ ಬಿದ್ದಿದ್ದು ಕಂಡುಬಂದಿದೆ. ಸಂತಾ ಕ್ರೂಜ್ನಲ್ಲಿ 68 ಶವಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
ಪತ್ತೆಯಾಗಿರುವ ಶವಗಳಲ್ಲಿ ಶೇ.85ಕ್ಕೂ ಹೆಚ್ಚು ಜನರಿಗೆ ಕೋವಿಡ್-19 ಸೋಂಕು ಇರುವುದು ಇಲ್ಲವೇ ಕರೊನಾ ವೈರಾಣು ಸೋಂಕಿನ ಲಕ್ಷಣಗಳು ಇರುವುದು ಪತ್ತೆಯಾಗಿದೆ. ಆದ್ದರಿಂದ ಅವೆಲ್ಲವನ್ನೂ ಕೋವಿಡ್ ಶಂಕಿತ ಪ್ರಕರಣಗಳು ಎಂದು ದಾಖಲಿಸಲಾಗುತ್ತದೆ. ಇನ್ನು ಶೇ.15 ಜನರು ವಿವಿಧ ಅನಾರೋಗ್ಯ ಕಾರಣದಿಂದ ಇಲ್ಲವೇ ಹೊಡೆದಾಡಿಕೊಂಡು ಸತ್ತಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಬೊಲಿವಿಯಾದಲ್ಲೇ ಸಾಂತಾ ಕ್ರೂಜ್ ಪ್ರದೇಶದಲ್ಲಿ ಗರಿಷ್ಠ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಪ್ರದೇಶದಲ್ಲೇ ಒಟ್ಟು 60 ಸಾವಿರಕ್ಕೂ ಹೆಚ್ಚು ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದೀಗ ಕೂಚಂಬಾಂಬಾ ಮತ್ತು ಲಾ ಪಾಜಾ ಪ್ರದೇಶಗಳಲ್ಲಿ ಸೋಂಕು ತೀವ್ರವಾಗಿ ಹಬ್ಬತ್ತಿರುವ ವರದಿಗಳು ಲಭ್ಯವಾಗುತ್ತಿವೆ ಎಂದು ಹೇಳಿದ್ದಾರೆ.
ಬೊಲಿವಿಯಾದ ವಿಧಿವಿಜ್ಞಾನ ತನಿಖಾ ಸಂಸ್ಥೆಯ ನಿರ್ದೇಶಕ ಆಂಡ್ರೆಸ್ ಫ್ಲೋರೆಸ್ ಪ್ರಕಾರ ಏಪ್ರಿಲ್ 1ರಿಂದ ಜುಲೈ 19ರವರೆಗೆ ರಸ್ತೆ ಬದಿಗಳಲ್ಲಿ ಒಟ್ಟು 3 ಸಾವಿರಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ. ಇವರೆಲ್ಲರೂ ಕೋವಿಡ್ನಿಂದ ಸತ್ತಿರುವ ಶಂಕೆ ಇದೆ ಎಂದು ಹೇಳಿದ್ದಾರೆ.