ಸಂಗೀತದಿಂದ ನಿರ್ದೇಶನದ ಕಡೆಗೆ; ಬಾಬಿ ನಿರ್ದೇಶನದ ಜಸ್ಟ್ ಮ್ಯಾರೀಡ್ ಮೊದಲ ಹಾಡು ಬಿಡುಗಡೆ

just-married
Published on

ಬೆಂಗಳೂರು: ‘ಕಾಂತಾರ’, ‘ವಿಕ್ರಾಂತ್ ರೋಣ’ ಸೇರಿ ಹಲವು ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ಖ್ಯಾತಿ ಅಜನೀಶ್ ಲೋಕನಾಥ್‌ಗೆ ಸಲ್ಲುತ್ತದೆ. ಅವರ ಪತ್ನಿ ಬಾಬಿ ಸಿ.ಆರ್. ಕೂಡ ‘ಬ್ಲ್ಯಾಕ್’, ‘ನೆನೆಯುವ ನಿನ್ನ’, ‘ಬಾಸು ಅದೇ ಹಳೇ ಕಥೆ’ ಸೇರಿ ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದು, ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಬಾಬಿ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಲು ರೆಡಿಯಾಗಿದ್ದಾರೆ.

ಚಿತ್ರದ ಶೀರ್ಷಿಕೆ ‘ಜಸ್ಟ್ ಮ್ಯಾರೀಡ್’. ಶೈನ್ ಶೆಟ್ಟಿ ಈ ಚಿತ್ರಕ್ಕೆ ನಾಯಕನಾಗಿದ್ದು, ಅವರಿಗೆ ಅಂಕಿತಾ ಅಮರ್ ನಾಯಕಿಯಾಗಿದ್ದಾರೆ. ಬಾಬಿ ಸಿ.ಆರ್ ಹಾಗೂ ಅಜನೀಶ್ ಲೋಕನಾಥ್ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ವಿಶೇಷ. ಗಣಪತಿ ಹಬ್ಬದ ಪ್ರಯುಕ್ತ ಇತ್ತೀಚೆಗಷ್ಟೆ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ಗಣಪತಿಯ ಕುರಿತಾದ ‘ಗಂ ಗಣೇಶಾಯ ನಮಃ’ ಎಂದು ಸಾಗುವ ಹಾಡಿಗೆ ಶಶಿ ಕಾವೂರ್ ಸಾಹಿತ್ಯ ರಚಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ವರುಣ್ ರಾಮಚಂದ್ರ, ಮಧ್ವೇಶ್ ಭಾರಧ್ವಾಜ್, ಅಭಿಷೇಕ್ ಹಾಗೂ ವಿಶಾಖ್ ಈ ಗೀತೆಯನ್ನು ಹಾಡಿದ್ದಾರೆ.

ಇದೊಂದು ಕ್ಲಾಸ್ ಮತ್ತು ಮಾಸ್ ಬೆರೆತಿರುವ ಪ್ರೇಮ ಕಥೆಯಾಗಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಈ ಮಾಸಾಂತ್ಯಕ್ಕೆ ಆರಂಭವಾಗಲಿದೆ. ಶೈನ್ ಶೆಟ್ಟಿ, ಅಂಕಿತಾ ಜತೆಗೆ ಶೃತಿ ಹರಿಹರನ್, ಅಚ್ಯುತ್‌ಕುಮಾರ್, ಸಾಕ್ಷಿ ಅಗರ್‌ವಾಲ್, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ ತಾರಾಬಳಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net