ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ ದೋಣಿಗಳು, ಗಂಗೊಳ್ಳಿ ವಾರ್ಫ್ ಪರಿಸರದಲ್ಲಿ ರೋಗ ಭೀತಿ, ಸ್ವಚ್ಛತೆಗೆ ಕ್ರಮ ವಹಿಸದ ಆಡಳಿತ

3 Min Read
boat
ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಪ್ರದೇಶದ ಚರಂಡಿಗಳಲ್ಲಿ ಮತ್ತು ನಿರುಪಯುಕ್ತ ದೋಣಿಗಳಲ್ಲಿ ಕೊಳಚೆ ನೀರು ನಿಂತಿರುವುದು ಮತ್ತು ನೀರಿನಲ್ಲಿ ತ್ಯಾಜ್ಯ ತುಂಬಿರುವುದು

ಬಿ.ರಾಘವೇಂದ್ರ ಪೈ ಗಂಗೊಳ್ಳಿ

ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯ ಮ್ಯಾಂಗನೀಸ್ ರಸ್ತೆ ವಾರ್ಫ್ ಪರಿಸರದಲ್ಲಿ ಎಲ್ಲೆಡೆ ಕೊಳಚೆ ನೀರು ನಿಂತಿದ್ದು, ನಿಂತ ನೀರಿನಲ್ಲಿ ತ್ಯಾಜ್ಯ ಕೊಳೆತು ನಾರುತ್ತಿದೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದೆ.

ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಪರಿಸರದಲ್ಲಿ ಬೋಟ್‌ಗಳನ್ನು ನಿಲ್ಲಿಸುವ ಸ್ಥಳ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದ್ದು ಬಂದರು ಇಲಾಖೆ ಮೌನ ವಹಿಸಿದೆ. ಮಳೆಗಾಲದಲ್ಲಿ ದೋಣಿಗಳನ್ನು ನಿಲ್ಲಿಸುವ ಜಾಗದಲ್ಲಿ ಹಾಗೂ ನಿರುಪಯುಕ್ತ ದೋಣಿಗಳಲ್ಲಿ ಮಳೆ ನೀರು ನಿಂತಿದ್ದು, ನೀರಿನಲ್ಲಿ ತ್ಯಾಜ್ಯ ಸೇರಿಕೊಂಡು ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ. ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ತ್ಯಾಜ್ಯ ಹೆಚ್ಚಾಗುತ್ತಿದ್ದು, ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ತ್ಯಾಜ್ಯದ ದುರ್ನಾತ ಪರಿಸರದ ಜನರನ್ನು ಕಂಗೆಡಿಸಿದೆ. ವಾಸನೆಯಿಂದ ಪರಿಸರದ ಸುತ್ತಮುತ್ತಲಿನ ಜನರು ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಜೆ ಬಳಿಕ ನುಸಿ ಕಾಟ ಹೆಚ್ಚಾಗಿದ್ದು ಜನರು ಆತಂಕಕ್ಕೊಳಗಾಗಿದೆ.

ರೋಗ ಹಬ್ಬುವ ಭೀತಿ

ಬೋಟ್ ರಿಪೇರಿ ಮತ್ತಿತರ ವಸ್ತುಗಳನ್ನು ಸ್ಥಳದಲ್ಲೇ ರಾಶಿ ಹಾಕಲಾಗಿದ್ದು, ಮಳೆಗಾಲದಲ್ಲಿ ತ್ಯಾಜ್ಯ ಕೊಳೆತು ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹಬ್ಬುವ ಭೀತಿ ಆವರಿಸಿದೆ. ಸುತ್ತಮುತ್ತಲಿನ ಮನೆಗಳಲ್ಲಿ ಸೊಳ್ಳೆ ಮತ್ತಿತರ ಕ್ರಿಮಿಕೀಟಗಳ ಹಾವಳಿ ವ್ಯಾಪಕವಾಗಿದ್ದು ಮಲೇರಿಯಾ, ಫೈಲೇರಿಯಾ, ಡೆಂೆ ಮತ್ತಿತರ ರೋಗ ಹಬ್ಬುವ ಭೀತಿ ಜನರನ್ನು ಕಾಡಲಾರಂಭಿಸಿದೆ.

ಸ್ಥಳೀಯರ ಆಕ್ರೋಶ

ಪ್ರತಿ ವರ್ಷ ಸಾವಿರಾರು ರೂ. ತೆರಿಗೆ ವಸೂಲಿ ಮಾಡುತ್ತಿರುವ ಬಂದರು ಇಲಾಖೆ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಯಾವುದೇ ಕ್ರಮಕೈಗೊಳ್ಳದಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಣಾಂತಿಕ ಕಾಯಿಲೆ ಉಲ್ಭಣಿಸುತ್ತಿರುವ ಈ ಸಂದರ್ಭದಲ್ಲಿ ಸ್ಥಳೀಯಾಡಳಿತವಾಗಲಿ ಅಥವಾ ಸಂಬಂಧಪಟ್ಟ ಇಲಾಖೆ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಂಡಿಲ್ಲ ಎಂಬ ಆರೋಪ ಸ್ಥಳೀಯ ನಿವಾಸಿಗಳಿಂದ ಕೇಳಿ ಬರುತ್ತಿದ್ದು ಪ್ರತಿನಿತ್ಯ ಹೆಚ್ಚುತ್ತಿರುವ ತ್ಯಾಜ್ಯ ಹಾಗೂ ನಿರುಪಯುಕ್ತ ವಸ್ತುಗಳಿಂದ ಪರಿಸರದ ಜನರು ಭಯಭೀತರಾಗಿದ್ದಾರೆ.

See also  ಆರೋಗ್ಯಾಧಿಕಾರಿ ವಿರುದ್ಧ ಕ್ರಮ:ಕುಂದಾಪುರ ತಾಪಂ ಸಾಮಾನ್ಯ ಸಭೆ ನಿರ್ಣಯ

ಅಧಿಕಾರಿಗಳಿಂದ ನಿರ್ಲಕ್ಷೃ

ಕಳೆದ ದೀಪಾವಳಿ ಹಬ್ಬದಂದು ನಡೆದ ಬೋಟ್ ಅಗ್ನಿ ದುರಂತದ ಸಂದರ್ಭ ಮ್ಯಾಂಗನೀಸ್ ವಾರ್ಫ್ ಪರಿಸರದ ನೈರ್ಮಲ್ಯ ಕಾಪಾಡುವ ಭರವಸೆ ನೀಡಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಬಳಿಕ ಈ ಪ್ರದೇಶದತ್ತ ಮತ್ತು ಈ ಪರಿಸರದ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಜನರ ಕಷ್ಟ ಅವರಿಗೆ ತಿಳಿಯುತ್ತಿಲ್ಲ. ಪರಿಸರದ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮ್ಯಾಂಗನೀಸ್ ವಾರ್ಫ್ ಪ್ರದೇಶದ ತ್ಯಾಜ್ಯ ವಿಲೇವಾರಿ ಬಗ್ಗೆ ಗಮನಹರಿಸಬೇಕಿದೆ. ಸಮಸ್ಯೆ ಬಗ್ಗೆ ನಿರ್ಲಕ್ಷೃ ವಹಿಸಿದರೆ ಜನರ ಆರೋಗ್ಯ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.


ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ನಿಂತ ನೀರಿನಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ತ್ಯಾಜ್ಯದ ವಾಸನೆಯಿಂದ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಜೆ ಬಳಿಕ ಸೊಳ್ಳೆ ಕಾಟ ಹೆಚ್ಚಾಗುತ್ತದೆ. ಹೀಗಾಗಿ ಪರಿಸರದ ಜನರ ಆರೋಗ್ಯ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಬಂದರು ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯಾಡಳಿತ ಮ್ಯಾಂಗನೀಸ್ ವಾರ್ಫ್ ಶುಚಿಗೊಳಿಸಲು ಕೂಡಲೇ ಕ್ರಮಕೈಗೊಳ್ಳಬೇಕು.
ಗುರು, ಸ್ಥಳೀಯ ನಿವಾಸಿ

ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ಬೋಟ್‌ಗಳಿಗೆ ಹೊದಿಸಲಾದ ಮಡಲು ಮತ್ತಿತರ ತ್ಯಾಜ್ಯಗಳನ್ನು ಅಲ್ಲಿ ರಾಶಿ ಹಾಕಿರುವುದರಿಂದ ಮಳೆಗಾಲದಲ್ಲಿ ತ್ಯಾಜ್ಯ ಕೊಳೆತು ಮತ್ತು ನಿರುಪಯುಕ್ತ ವಸ್ತುಗಳ ಮೇಲೆ ಮಳೆ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು.
ಗಣೇಶ, ಬೋಟ್ ಕಾರ್ಮಿಕ

ಆರೋಗ್ಯ ಇಲಾಖೆ ಮೂಲಕ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಪರಿಸರ ಸ್ವಚ್ಛವಾಗಿಡುವಂತೆ ಮನವಿ ಮಾಡುತ್ತಿದ್ದಾರೆ. ಮಳೆಗಾಲದ ಸಮಯ ಸೊಳ್ಳೆ ಹೆಚ್ಚಾಗಿದ್ದು, ಸೊಳ್ಳೆ ಉತ್ಪತ್ತಿಯಾಗದಂತೆ ಜನರು ಎಚ್ಚರಿಕೆ ವಹಿಸಬೇಕು.
-ಡಾ.ಅಮಿತಾ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ

Share This Article