ಅವರೆಲ್ಲಾ ದೊಡ್ಡ ಮಂದಿ, ಯಾರು ಏನೂ ಮಾಡಲ್ಲ; ಅಪಘಾತದಲ್ಲಿ ಪತ್ನಿ ಕಳೆದುಕೊಂಡ ಪತಿ ಕಣ್ಣೀರು

ವಿಜಯವಾಣಿ - 2024-07-07T172909.956
Published on

ಮುಂಬೈ: ಇಂದು (ಜು.07) ಮಹಾರಾಷ್ಟ್ರದ ವರ್ಲಿಯಲ್ಲಿ ವೇಗದ ಮಿತಿ ಮೀರಿ ಬಂದ ಬಿಎಂಡಬ್ಲ್ಯು ಕಾರೊಂದು ಬೈಕ್‌ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಮುಂಬೈ ನಗರದಲ್ಲಿ ವರದಿಯಾಗಿದೆ. ಬೈಕ್​ನಲ್ಲಿದ್ದ ದಂಪತಿ ವರ್ಲಿಯ ಕೋಳಿವಾಡ ಪ್ರದೇಶದ ನಿವಾಸಿಗಳಾಗಿದ್ದು, ಸಾಸೂನ್ ಡಾಕ್‌ನಿಂದ ಮೀನು ತೆಗೆದುಕೊಂಡು ಮನೆಗೆ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ.

ಘಟನೆ ನಡೆದ ಬೆನ್ನಲ್ಲೇ ವರ್ಲಿ ಪೊಲೀಸರು ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದ್ದು, ಸ್ಥಳದಿಂದ ಪರಾರಿಯಾಗಿದ್ದ ಕಾರಿನ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನ ಮಾಲೀಕರು ಪಾಲ್ಘರ್‌ನ ಶಿವಸೇನೆಯ (ಶಿಂಧೆ) ಸ್ಥಳೀಯ ನಾಯಕ ರಾಜೇಶ್ ಷಾ ಎಂದು ಹೇಳಲಾಗಿದೆ. ಅಪಘಾತದ ವೇಳೆ ಚಾಲಕ ಮತ್ತು ರಾಜೇಶ್ ಷಾ ಅವರ ಪುತ್ರ ಕಾರಿನೊಳಗೆ ಇದ್ದರು ಎಂದು ಶಂಕಿಸಲಾಗಿದೆ.

ಅಪಘಾತದಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ಪತಿ ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, "ಅಪಘಾತ ಮುಂಜಾನೆ 5.30ಕ್ಕೆ ಸಂಭವಿಸಿತು. ಕಾರು ಹಿಂದಿನಿಂದ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ತಕ್ಷಣ ನಾನು ಎಡಕ್ಕೆ ಬಿದ್ದೆ. ಆದರೆ ನನ್ನ ಹೆಂಡತಿಯನ್ನು ಕಾರು 100 ಮೀ. ಎಳೆದೊಯ್ಯಿತು. ನನಗೆ ಇಬ್ಬರು ಮಕ್ಕಳಿದ್ದಾರೆ. ಏನು ಮಾಡಲಿ ನಾನು? ಇವರೆಲ್ಲಾ ದೊಡ್ಡ ವ್ಯಕ್ತಿಗಳು. ಇವರಿಗೆ ಯಾರು ಏನೂ ಮಾಡುವುದಿಲ್ಲ" ಎಂದು ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net