ವಿಜಯವಾಣಿ ಸುದ್ದಿಜಾಲ ಉಳ್ಳಾಲ
ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಭಾಗವಹಿಸುತ್ತಾರೆಯೇ ಹೊರತು ಒಂದು ಸಮಾಜದವರು ಮಾತ್ರ ಅಲ್ಲ. ಈ ಹಿನ್ನೆಲೆಯಲ್ಲಿ ಸೌಹಾರ್ದ ಭದ್ರಪಡಿಸಲು ಶಿಬಿರ ಭದ್ರ ಬುನಾದಿಯಾಗಿದೆ ಎಂದು ರೆಡ್‌ಕ್ರಾಸ್ ಸೊಸೈಟಿಯ ಸಂಯೋಜಕ ಪ್ರವೀಣ್ ಕುಮಾರ್ ಹೇಳಿದರು.
ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರೃವಂತ ಪ್ರವಾದಿ (ಸ) ಸಂದೇಶ ಅಭಿಯಾನ ಪ್ರಯುಕ್ತ ಮಂಗಳೂರಿನ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ವತಿಯಿಂದ ಸೋಮವಾರ ಕಲ್ಲಾಪಿನಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್‌ಐಒ ದ.ಕ. ಜಿಲ್ಲಾಧ್ಯಕ್ಷ ಮಹಮ್ಮದ್ ಆಸಿಫ್ ಶಿಬಿರ ಉದ್ಘಾಟಿಸಿ ಮಾತನಾಡಿ, ಒಂದು ಜೀವ ಉಳಿಸಿದರೆ ಸಕಲ ಮಾನವರ ಜೀವ ರಕ್ಷಿಸಿದಂತೆ, ಒಬ್ಬನ ಜೀವ ತೆಗೆದರೆ ಸಕಲ ಮಾನವರ ಜೀವ ತೆಗೆದಂತೆ ಎನ್ನುವುದು ಇಸ್ಲಾಮಿನ ಸಂದೇಶ. ರಕ್ತದಾನ ಶಿಬಿರದ ಮೂಲಕ ಮಾನವರ ಜೀವ ಉಳಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ರಕ್ತದಿಂದ ಒಂದು ಜೀವ ಉಳಿದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಎಂದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿಖಿಲ್ ಕೆ., ಕರ್ನಾಟಕ ಬ್ಲಡ್ ಹೆಲ್ಪ್‌ಲೈನ್ ಅಧ್ಯಕ್ಷ ನಝೀರ್ ಹುಸೈನ್, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಘಟಕದ ಉಪಾಧ್ಯಕ್ಷ ಅಬ್ದುಲ್ ಲತೀಫ್ ಆಲಿಯಾ, ಉಳ್ಳಾಲ ವಲಯ ಅಧ್ಯಕ್ಷ ಅಬ್ದುಲ್ ಕರೀಂ, ಸಮಾಜ ಸೇವಾ ಘಟಕ ಉಳ್ಳಾಲ ವಲಯ ಕಾರ್ಯದರ್ಶಿ ಹಿದಾಯತುಲ್ಲಾ ಮೊದಲಾದವರು ಉಪಸ್ಥಿತರಿದ್ದರು. ಎಸ್‌ವೈಎಂ ದ.ಕ. ಜಿಲ್ಲಾಧ್ಯಕ್ಷ ನಿಝಾಮುದ್ದೀನ್ ಉಮರ್ ಪ್ರಾಸ್ತಾವಿಕ ಮಾತನಾಡಿದರು.
ಹೆತ್ತವರು ಮಕ್ಕಳಿಗೆ, ಮಕ್ಕಳು ಹೆತ್ತವರಿಗೆ ಕಿಡ್ನಿದಾನ ಮಾಡಬಹುದು. ಆದರೆ ಯಾರ ರಕ್ತ ಯಾರಿಗೆ ನೀಡಲಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಇಲ್ಲಿ ಜಾತಿ, ಧರ್ಮಕ್ಕಿಂತ ಗುಂಪು ಮಾತ್ರ ಮುಖ್ಯ. ರಕ್ತದಾನದಿಂದ ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳನ್ನು ದೂರ ಮಾಡಬಹುದು.
ನಿಖಿಲ್ ಕೆ., ವೈದ್ಯಾಧಿಕಾರಿ, ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರ