

ಸನಾ: ಹೊಸ ವರ್ಷದ ಮುನ್ನಾದಿನ ಯೆಮೆನ್ನ ಆಡೆನ್ ವಿಮಾನ ನಿಲ್ದಾಣದಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಕನಿಷ್ಠ 25 ಜನ ಮೃತಪಟ್ಟು 110ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯವಾಗಿ ಮಾನ್ಯವಾಗಿರುವ ಯೆಮೆನ್ ಸರ್ಕಾರ ತಿಳಿಸಿದೆ. ಇರಾನ್ ಪ್ರಾಯೋಜಿತ ಹೌತಿ ಬಂಡುಕೋರರು ವಿಮಾನ ನಿಲ್ದಾಣದ ಮೇಲೆ ನಾಲ್ಕು ಕ್ಷಿಪಣಿಗಳನ್ನು ಪ್ರಯೋಗಿಸಿ ಈ ದಾಳಿ ನಡೆಸಿದ್ದಾರೆ ಎಂದು ಯೆಮೆನ್ ಸರ್ಕಾರ ಆರೋಪಿಸಿದೆ. ಆದಾಗ್ಯೂ, ಹೌತಿ ಬಂಡುಕೋರರು ಈ ಕೃತ್ಯದ ಹೊಣೆಗಾರಿಕೆಯನ್ನು ಇನ್ನೂ ಹೊತ್ತುಕೊಂಡಿಲ್ಲ.
ವಿಮಾನದಲ್ಲಿ ಆಗಮಿಸಿದ ಸಂವಹನ ಸಚಿವ ನಗ್ಯುಬ ಅಲ್ -ಅವ್ಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎರಡು ಸ್ಫೋಟಗಳ ಶಬ್ದಗಳನ್ನು ಕೇಳಿದೆ. ಡ್ರೋಣ್ ದಾಳಿ ಇರಬೇಕು ಎಂದುಕೊಂಡಿದ್ದೆವು. ಪ್ರಧಾನ ಮಂತ್ರಿ ಮಯೀನ್ ಅಬ್ದುಲ್ ಮಲಿಕ್ ಸಯೀದ್ ಮತ್ತು ಇತರರು ಕೂಡಲೇ ವಿಮಾನ ನಿಲ್ದಾಣದಿಂದ ಮಶಿಕ್ ಪ್ಯಾಲೇಸ್ಗೆ ತೆರಳಿದರು. ಸ್ವಲ್ಪ ಮುಂಚೆ ವಿಮಾನ ಲ್ಯಾಂಡ್ ಆಗಿದ್ದರೂ ಆ ಬಾಂಬ್ ದಾಳಿಗೆ ಈಡಾಗುತ್ತಿತ್ತೇನೋ ಹಾಗಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸಿಬಿಡುತ್ತಿತ್ತು ಎಂದು ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಸಯೀದ್ ಬಳಿಕ ಟ್ವೀಟ್ ಮಾಡಿದ್ದು,ನಾನು ಮತ್ತು ನನ್ನ ಸಂಪುಟ ಸಹೋದ್ಯೋಗಿಗಳು ಯಾವುದೇ ಗಾಯಗಳಾಗದೇ ಸೇಫ್ ಆಗಿದ್ದೇವೆ. ಈ ಉಗ್ರ ಕೃತ್ಯ ಪೈಶಾಚಿಕವಾಗಿದ್ದು, ಖಂಡನೀಯ. ನಮ್ಮ ಯೆಮೆನ್ಗೆ ಮತ್ತು ಯೆಮೆನ್ ಜನರಿಗೆ ಇವೆಲ್ಲವೂ ಯುದ್ಧದ ಭಾಗವಾಗಿ ಬಿಟ್ಟಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ, ಸಂಪುಟ ಸಚಿವಾಲಯ ಪ್ರತಿಕ್ರಿಯಿಸಿದ್ದು, ಬಂಡುಕೋರರು ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ವಿಮಾನ ನಿಲ್ದಾಣದ ಮೇಲೆ ಉಡಾಯಿಸಿದ್ದರು. ಸರ್ಕಾರದ ಶಕ್ತಿ ಕೇಂದ್ರವಾಗಿರುವ ಅರಮನೆ ಮೇಲೂ ಡ್ರೋಣ್ ದಾಳಿಯನ್ನು ಮಾಡಿದ್ದರು ಎಂದು ತಿಳಿಸಿದೆ (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..