ಬೆಂಗಳೂರಿನಲ್ಲಿ ಆತಂಕ ಹುಟ್ಟಿಸಿದ ಕಪ್ಪು ಸೂಟ್​ಕೇಸ್​; ಹತ್ತಿರ ಹೋಗಲು ಹೆದರಿದ ಜನ..

Suitcase 1
Published on

ಬೆಂಗಳೂರು: ನಿನ್ನೆಯಷ್ಟೇ ಜಮ್ಮು-ಕಾಶ್ಮೀರದ ಗಡಿಪ್ರದೇಶದಲ್ಲಿ ನಡೆದಿದ್ದ ಭಯೋತ್ಪಾದಕ ಚಟುವಟಿಕೆ ದೇಶದಲ್ಲಿ ಒಂದು ರೀತಿಯ ಆತಂಕ ಹುಟ್ಟಿಸಿದ್ದರೆ, ಇಂದು ರಾಜಧಾನಿ ಬೆಂಗಳೂರಿನಲ್ಲಿ ವಾರಸುದಾರರಿಲ್ಲದೆ ಕಂಡುಬಂದ ಕಪ್ಪು ಸೂಟ್​ಕೇಸ್​ ಸಾರ್ವಜನಿಕರಲ್ಲಿ ಕೆಲಕಾಲ ಭಯ ಮೂಡಿಸಿತ್ತು.

ಮಲ್ಲೇಶ್ವರದ 18ನೇ ಅಡ್ಡರಸ್ತೆ ಸಮೀಪ ಕಪ್ಪು ಸೂಟ್​ಕೇಸ್​ ಕೆಲವು ಕಾಲ ವಾರಸುದಾರರಿಲ್ಲದೆ ಕಂಡುಬಂದಿದ್ದರಿಂದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಾಂಬ್​ ಪತ್ತೆ ದಳದೊಂದಿಗೆ ಸ್ಥಳಕ್ಕೆ ಆಗಮಿಸಬೇಕಾಯಿತು. ಸೂಕ್ತ ಎಚ್ಚರಿಕೆಯೊಂದಿಗೆ ಬಾಂಬ್​ ಪತ್ತೆ ದಳದವರು ಸೂಟ್​ಕೇಸ್​ಅನ್ನು ಪರೀಕ್ಷಿಸಿದ್ದು, ಅದು ಮಾಮೂಲಿ ಬಟ್ಟೆ ಇರುವ ಸೂಟ್​ಕೇಸ್​ ಎಂಬುದು ಖಚಿತವಾಗುತ್ತಿದ್ದಂತೆ ಸುತ್ತಮುತ್ತಲ ಜನರಲ್ಲಿ ಮೂಡಿದ್ದ ಆತಂಕ ಮರೆಯಾಯಿತು.

ಅದಾಗ್ಯೂ ಆ ಸೂಟ್​ಕೇಸ್ ಅಲ್ಲಿ ಏಕೆ ಬಂತು, ಯಾರು ಯಾಕೆ ಇಟ್ಟು ಹೋದರು ಎಂಬಿತ್ಯಾದಿ ವಿಷಯಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದಕ್ಕಾಗಿ ಸುತ್ತಮುತ್ತಲ ಸಿಸಿಟಿವಿ ಕ್ಲಿಪ್ಪಿಂಗ್​ಗಳನ್ನೂ ಪರಿಶೀಲಿಸುವ ಕೆಲಸವೂ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net