

ಬೆಂಗಳೂರು: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತೇವೆ ಎಂದು ಪ್ರತಿಪಕ್ಷಗಳು ಭಾವಿಸಿ, ಎಲ್ಲಿಲ್ಲದ ಉಮೇದಿ ಪ್ರಕಟಿಸಿದ್ದವು. ಜನರ ವಿಶ್ವಾಸ, ಒಲವಿಗೆ ಪಾತ್ರವಾದ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ, ಪ್ರತಿಪಕ್ಷಗಳಿಗೆ ಮರ್ಮಾಘಾತ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ವಿಶ್ಲೇಷಿದರು.
ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಗೆ ಪಕ್ಷ ಯೋಜನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸೇರಿ ದೇಶದೆಲ್ಲೆಡೆ ಬಿಜೆಪಿ ಪರ ವಾತಾವರಣವಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವಿನ ಮುನ್ಸೂಚನೆ ನೀಡಿದ್ದು, ಜನರಿಗೆ ಮತ್ತಷ್ಟು ಹತ್ತಿರ ಹಾಗೂ ಕಾರ್ಯಕರ್ತರ ನಿಕಟ ಕಾರ್ಯತತ್ಪರತೆಯು ವಿಶ್ವಾಸ ಹೆಚ್ಚಿಸಲಿದೆ ಎಂದು ಹೇಳಿದರು.
ಭಾರಿ ನಿರೀಕ್ಷೆಯೊಂದಿಗೆ ಜನರು ಕಾಂಗ್ರೆಸ್ ಗೆ ನಿಚ್ಚಳ ಬಹುಮತದ ಆದೇಶ ನೀಡಿದರು. ಆದರೆ ಅಧಿಕಾರದ ಚುಕ್ಕಾಣಿ ಏಳು ತಿಂಗಳಲ್ಲಿ ಎಲ್ಲ ಹಂತದಲ್ಲೂ ವಿಫಲವಾಗಿದೆ. ಬರ ಪೀಡಿತ ರೈತರಿಗೆ ಸ್ಪಂದಿಸುತ್ತಿಲ್ಲ, ದಲಿತರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತಗೊಳಿಸಿದೆ.
ಇದರಿಂದಾಗಿ ರೋಸಿ ಹೋಗಿರುವ ಜನರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸಲು ಸಜ್ಜಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು, ಪಕ್ಷದ ಪರವಾದ ಅಲೆ ಸಮರ್ಪಕವಾಗಿ ಬಳಸಿಕೊಂಡು ಲೋಕಸಭೆ ಚುನಾವಣೆಯನ್ನು ಯೋಜನಾ ಬದ್ಧವಾಗಿ ಎದುರಿಸಲು ಮೊದಲ ಸಭೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಭೆ ನಡೆಯಲಿವೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.
ಈ ಸಭೆಗೆ ಒಟ್ಟು 54 ಜನ ಪ್ರಮುಖರನ್ನು ಆಹ್ವಾನಿಸಲಾಗಿದೆ. ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಡಾ.ಕೆ.ಸುಧಾಕರ್ ಹಾಜರಾದರು. ಸಂಜೆಯೊಳಗೆ ಮತ್ತೊಬ್ಬ ಮಾಜಿ ಮಂತ್ರಿ ವಿ.ಸೋಮಣ್ಣ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮತು ಮುಖಂಡರು ಉಪಸ್ಥಿತರಿದ್ದರು.