MP Election 2023: 'ಭಾರತೀಯ ಜನತಾ ಪಕ್ಷದ ಗೆಲುವು ಖಚಿತ': ಶಿವರಾಜ್ ಸಿಂಗ್ ಚೌಹಾಣ್

MP CM
Published on

ಭೋಪಾಲ್: ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಪಕ್ಷವು ಮಂಗಳವಾರ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಂದೇ ಒಂದು ಹೆಸರಿತ್ತು. ಆ ಹೆಸರು ಮೋನಿಕಾ ಬಟ್ಟಿ. ಇವರು ಕೆಲವೇ ದಿನಗಳ ಹಿಂದೆ ಬಿಜೆಪಿ ಸೇರಿದ್ದರು. ಇದೀಗ ಮೂರನೇ ಪಟ್ಟಿ ಕುರಿತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೀಡಿರುವ ಪ್ರತಿಕ್ರಿಯೆ ಬೆಳಕಿಗೆ ಬಂದಿದೆ.

ಮೂರನೇ ಪಟ್ಟಿ ಕುರಿತು ಅದ್ಭುತವಾಗಿದೆ ಎಂದು ಹೇಳಿರುವ ಶಿವರಾಜ್ ಸಿಂಗ್ ಚೌಹಾಣ್, ಇದು ಭಾರತೀಯ ಜನತಾ ಪಕ್ಷದ ಭರ್ಜರಿ ಗೆಲುವನ್ನು ಖಾತ್ರಿಪಡಿಸಿದೆ. ನಮ್ಮ ಹಿರಿಯರೆಲ್ಲರೂ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ನವರು ಆತಂಕದಲ್ಲಿದ್ದಾರೆ. ಬಿಜೆಪಿ ನಿರಂತರವಾಗಿ ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಎರಡನೇ ಪಟ್ಟಿ ಬಿಡುಗಡೆಯಾದಾಗ ಮುಖ್ಯಮಂತ್ರಿಗಳು ಬಿಜೆಪಿಯ ಅಭಿವೃದ್ಧಿ ನೀತಿಗಳಿಗೆ ಸಾರ್ವಜನಿಕರ ಆಶೀರ್ವಾದವಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಅಭ್ಯರ್ಥಿಗಳು ಐತಿಹಾಸಿಕ ಗೆಲುವು ಸಾಧಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದಿದ್ದರು.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಸಜ್ಜಾಗಿದೆ. ಸೋಮವಾರ ತಡರಾತ್ರಿ ಬಿಜೆಪಿ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಹಲವು ಅಚ್ಚರಿಯ ನಾಯಕರ ಹೆಸರುಗಳಿವೆ, ಇದರಲ್ಲಿ ಕೈಲಾಶ್ ವಿಜಯವರ್ಗಿಯಾ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಇದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಮಧ್ಯಪ್ರದೇಶದಲ್ಲಿ ಕಠಿಣ ಸ್ಪರ್ಧೆಯಿರಲಿದೆ. 230 ವಿಧಾನಸಭಾ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕುತೂಹಲದ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜ್ಯದ ಆಡಳಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೈಯಲ್ಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೋಪಾಲ್‌ಗೆ ಭೇಟಿ ನೀಡಿರುವುದು ಬಿಜೆಪಿ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ.

ಪ್ರಧಾನಿ ಮೋದಿ ಭೇಟಿಯ ಕೆಲವೇ ಗಂಟೆಗಳಲ್ಲಿ ಬಿಜೆಪಿ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಬಿಜೆಪಿ ಹಲವು ದೊಡ್ಡ ಮುಖಗಳನ್ನು ಕಣಕ್ಕಿಳಿಸಿದೆ. ಇದರಲ್ಲಿ ಮೂವರು ಕೇಂದ್ರ ಸಚಿವರು ಸೇರಿದಂತೆ ಏಳು ಸಂಸದರ ಹೆಸರುಗಳಿದ್ದು, ಕಾಂಗ್ರೆಸ್ ಅನ್ನು ಎಲ್ಲಾ ಕಡೆಯಿಂದ ಮೂಲೆಗುಂಪು ಮಾಡಲು ಸಿದ್ದವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net