

ನವದೆಹಲಿ: ಖಾತೆ ಬಗ್ಗೆ ಕ್ಯಾತೆ ತೆಗೆದವರಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಚಾಟಿ ಬೀಸಿದ್ದಾರೆ. ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಸದ್ಯಕ್ಕೆ ಯಾವ ಖಾತೆಯೂ ಬದಲಾವಣೆ ಇಲ್ಲ ಎಂದಿದ್ದಾರೆ.
"ಸಚಿವರಾದ ಬಳಿಕ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಯಾವುದೇ ಪ್ರತಿಫಲಗಳ ಅಪೇಕ್ಷೆ ಇಲ್ಲದೆ ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅವರೆಲ್ಲರ ನಡುವೆ ಇವರಿಗೆ ಅಧಿಕಾರ ಸಿಕ್ಕಿದೆ. ಈಗ ಕೊಟ್ಟಿರುವ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಲಿ. ಯಾವ ಖಾತೆಯೂ ಬದಲಾವಣೆ ಇಲ್ಲ" ಎಂದು ಅರುಣ್ ಸಿಂಗ್ ಹೇಳಿದರು.
ಕರ್ನಾಟಕದ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ವಿಚಾರ ಕೇಳಿದ್ದಕ್ಕೆ, ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ. ಹೈಕಮಾಂಡ್ ಕೆಲವು ಸಲಹೆ ಕೊಡಬಹುದು ಎಂದರು. ಸಚಿವ ಸಂಪುಟದಲ್ಲಿ ವಿಜಯೇಂದ್ರ ಸೇರ್ಪಡೆ ಬಗೆಗಿನ ಪ್ರಶ್ನೆಗೆ, ವಿಜಯೇಂದ್ರ ಚಾಣಾಕ್ಷತನ ಇರುವ ಯುವ ನಾಯಕ. ಅವರ ಕೆಲಸದ ಬಗ್ಗೆ ನನಗೆ ಗೊತ್ತಿದೆ. ಸದ್ಯ ಉಪಾದ್ಯಕ್ಷರಾಗಿದ್ದಾರೆ. ಸೂಕ್ತ ಸಮಯದಲ್ಲಿ ಪಕ್ಷ ನಿರ್ಧಾರ ಕೈಗೊಳ್ಳುತ್ತೆ ಎಂದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಂಪುಟ ಸೇರಲು ಯತ್ನ ಹಿನ್ನೆಲೆಯಲ್ಲಿ, ಹೈಕಮಾಂಡ್ ಅಥವಾ ನನ್ನನ್ನಾಗಲಿ ಅವರು ಭೇಟಿ ಮಾಡಿಲ್ಲ. ಈ ಬಗ್ಗೆ ಸರಿಯಾದ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ಪ್ರವಾಸ ಕೈಗೊಳ್ಳಲಿದ್ದೇನೆ. ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗಳಿಸಿದರೆ ಮುಂದಿನ ಚುನಾವಣೆಯಲ್ಲಿ ಬಹುಮತ ಸಾಧಿಸಲು ನೆರವಾಗಲಿದೆ. ಹೀಗಾಗಿ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದೇವೆ ಎಂದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಕರ್ನಾಟಕದ ಬಿಜೆಪಿಯಲ್ಲಿ ಅತಿ ಹಿರಿಯ ನಾಯಕ ಯಡಿಯೂರಪ್ಪ. ಅವರ ರಾಜ್ಯ ಪ್ರವಾಸದಿಂದ ಪಕ್ಷಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಅವರಿಗೆ ರಾಜ್ಯದ ಪ್ರತಿ ಮೂಲೆಯೂ ಗೊತ್ತಿದೆ. ಅವರ ಅನುಭವವನ್ನು ಪಕ್ಷ ಬಳಸಿಕೊಳ್ಳುತ್ತದೆ ಎಂದರು.