

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿರುವುದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಬಿಜೆಪಿ, ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಜ್ಜಾಗುತ್ತಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿನ ಬಿಜೆಪಿ ಸಂಸದರು ಇಂದು ಸಭೆ ಸೇರಿ ಭಾರಿ ಚರ್ಚೆ ನಡೆಸಿದ್ದು, ಮಹತ್ವದ ನಿರ್ಣಯಗಳನ್ನೂ ಕೈಗೊಂಡಿರುವುದು ಬಹಿರಂಗಗೊಂಡಿದೆ.
ವಿಧಾನಸಭಾ ಚುನಾವಣೆಯಲ್ಲಿನ ಸೋಲು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರದಂತೆ ಕಾರ್ಯತಂತ್ರ ರೂಪಿಸುವುದಕ್ಕೆ ಈ ಸಭೆಯಲ್ಲಿ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ಕ್ಷೇತ್ರದಲ್ಲಿ ಸಂಘಟನೆ ಚುರುಕುಗೊಳಿಸುವುದು, ಹಳೆಯ ಕಾರ್ಯಕರ್ತರಿಗೆ ಜವಾಬ್ದಾರಿ ನೀಡುವುದು ಮಾತ್ರವಲ್ಲದೆ, ತಳಮಟ್ಟದಿಂದ ಸಂಘಟನೆ ಗಟ್ಟಿ ಗಟ್ಟಿಗೊಳಿಸುವುದರ ಬಗ್ಗೆಯೂ ಗಮನ ಹರಿಸಲಾಗಿದೆ. ಜತೆಗೆ ನಾಳೆಯಿಂದ ಜೂನ್ 30ರವರೆಗೆ ನಡೆಯಲಿರುವ ಮಹಾ ಸಂಪರ್ಕ ಅಭಿಯಾನದಲ್ಲೂ ತೊಡಗಿಸಿಕೊಳ್ಳಲೂ ಯೋಜನೆ ಹಾಕಿಕೊಳ್ಳಲಾಗಿದೆ.
ಲೋಕಸಭಾ ಚುನಾವಣೆ ತಯಾರಿ ಕುರಿತು ಸಂಸದರು ತಮ್ಮಲ್ಲಿರುವ ಹೊಸಹೊಸ ಯೋಚನೆಗಳನ್ನು ಹಂಚಿಕೊಂಡರು. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂಬತ್ತು ವರ್ಷಗಳ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಸಲುವಾಗಿ ಮನೆಮನೆಗೆ ಕೇಂದ್ರ ಸರ್ಕಾರದ ಕಾರ್ಯಕ್ರಮ ತಲುಪಿಸಲಿಕ್ಕೂ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಫಲಾನುಭವಿಗಳ ಸಭೆ ನಡೆಸಲು ತೀರ್ಮಾನಿಸಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಹಳ್ಳಿಹಳ್ಳಿಗಳಲ್ಲಿ ಜನರಿಗೆ ಮಾಹಿತಿ ನೀಡುವುದು, ಲೋಕಸಭಾ ಕ್ಷೇತ್ರಗಳಲ್ಲಿ ಪ್ರಬುದ್ಧರ ಸಭೆ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ. ಆಯಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಸಾಧಕರ ನಿವಾಸಗಳಿಗೆ ಭೇಟಿ ನೀಡಿ, ಬಿಜೆಪಿ ಪರ ಒಲವು ತೋರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಈ ಸಭೆಯಲ್ಲಿ ಒಲವು ತೋರಲಾಗಿದೆ.