ಗೌತಮ್​ ಗಂಭೀರ್​ ರಾಜಕೀಯ ಬಿಟ್ಟಿದ್ದೇಕೆ? ಇಲ್ಲಿದೆ ಅಸಲಿ ಕಾರಣ...

gambhir web
Published on

ನವದೆಹಲಿ: ಬಿಜೆಪಿ ಹಾಲಿ ಸಂಸದರಾಗಿರುವ ಟೀಮ್​ ಇಂಡಿಯಾದ ಮಾಜಿ ಎಡಗೈ ಬ್ಯಾಟರ್​ ಗೌತಮ್​ ಗಂಭೀರ್​, ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಜಕೀಯಕ್ಕೆ ಗುಡ್​ಬೈ ಹೇಳಿದ್ದಾರೆ. ಮಾರ್ಚ್​ 22ರಿಂದ ನಡೆಯಲಿರುವ ಐಪಿಎಲ್​ 17ನೇ ಆವೃತ್ತಿಯಲ್ಲಿ ಕೋಲ್ಕತ ನೈಟ್​ರೈಡರ್ಸ್​ ತಂಡದ ಮೆಂಟರ್​ ಆಗಿ ಕಾರ್ಯನಿರ್ವಹಿಸುವತ್ತ ಗಮನಹರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಗಂಭೀರ್​ ಹೇಳಿಕೊಂಡಿದ್ದಾರೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್​ ಕೈತಪ್ಪುವ ಭೀತಿಯಿಂದಲೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಮೇಲುನೋಟದಲ್ಲೇ ಸ್ಪಷ್ಟವಾಗುತ್ತಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ದೆಹಲಿಯಿಂದ ಗೆದ್ದುಬಂದಿರುವ ಗಂಭೀರ್​, ಈ ಬಾರಿ ಮರುಆಯ್ಕೆ ಬಯಸದೆ ರಾಜಕೀಯದಿಂದಲೇ ದೂರು ಉಳಿದಿದ್ದಾರೆ. ಈ ಸಂಬಂಧ ಗಂಭೀರ್​, "ರಾಜಕೀಯ ಚಟುವಟಿಕೆಗಳಿಂದ ನನ್ನನ್ನು ಮುಕ್ತಿಗೊಳಿಸಿ. ನಾನು ಮುಂಬರುವ ಕ್ರಿಕೆಟ್​ ಸವಾಲುಗಳತ್ತ ಗಮನಹರಿಸಲು ಬಯಸಿದ್ದೇನೆ' ಎಂದು ಸಾಮಾಜಿಕ ಜಾಲತಾಣ "ಎಕ್ಸ್​' ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಮನವಿ ಸಲ್ಲಿಸಿದ್ದಾರೆ.

ಈ ಬಾರಿ ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಟಿಕೆಟ್​ ಗೌತಮ್​ ಗಂಭೀರ್​ ಕೈತಪ್ಪಲಿದೆ ಎಂಬ ವರದಿಗಳ ನಡುವೆ ಅವರಿಂದ ಈ ನಿರ್ಧಾರ ಹೊರಬಿದ್ದಿದೆ. ಮತ್ತೆ ಪೂರ್ವ ದೆಹಲಿಯಿಂದಲೇ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವೆ ಎಂದು ಇತ್ತೀಚೆಗಷ್ಟೇ ಹೇಳಿದ್ದ ಗಂಭೀರ್​, ಗುರುವಾರವಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್​ರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಗಂಭೀರ್​ ದಿಢೀರ್​ ರಾಜಕೀಯ ನಿವೃತ್ತಿ ಅಚ್ಚರಿ ತಂದಿದೆ.

ಗಂಭೀರ್​ ತನ್ನ ಕ್ಷೇತ್ರದಲ್ಲಿ ಬಡವರಿಗೆ 1 ರೂ. ಊಟದ ವ್ಯವಸ್ಥೆ, ಗ್ರಂಥಾಲಯಗಳ ನಿರ್ಮಾಣ, ಕಸ ವಿಲೇವರಿ ಯಂತ್ರ ಸ್ಥಾಪನೆಯಂಥ ಉತ್ತಮ ಕೆಲಸಗಳನ್ನು ಮಾಡಿರುವ ನಡುವೆ, 2020ರ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿಗೆ ಉತ್ತಮ ಲಿತಾಂಶ ತಂದುಕೊಟ್ಟಿದ್ದರು. ಆದರೆ, ಸ್ಥಳಿಯ ಬಿಜೆಪಿ ನಾಯಕರ ಜತೆಗೆ ಉತ್ತಮ ಸಂಬಂಧ ಹೊಂದಿರದ ಮತ್ತು ಸಂಸದರಾದ ಬಳಿಕವೂ ಕ್ರಿಕೆಟ್​ ಚಟುವಟಿಕೆಯಲ್ಲಿ ಮುಂದುವರಿದಿದ್ದ ಕಾರಣದಿಂದಾಗಿ ಈ ಬಾರಿ ಟಿಕೆಟ್​ನಿಂದ ವಂಚಿತರಾಗುವ ಸ್ಥಿತಿಗೆ ತಲುಪಿದ್ದರು ಎನ್ನಲಾಗಿದೆ. ಇದರ ಮುನ್ಸೂಚನೆಯಿಂದಲೇ ಗಂಭೀರ್​ ಈಗ ರಾಜಕೀಯದಿಂದಲೇ ದೂರವಿರಲು ನಿರ್ಧರಿಸಿದ್ದಾರೆ.

ಕೆಕೆಆರ್​ ಮೆಂಟರ್​

ಲೋಕಸಭಾ ಚುನಾವಣೆಯ ನಡುವೆ ಭಾರತದಲ್ಲೇ ಆಯೋಜನೆಗೊಂಡಿರುವ ಐಪಿಎಲ್​ ಟೂರ್ನಿಯಲ್ಲಿ ಗಂಭೀರ್​ ಈ ಬಾರಿ ಮೆಂಟರ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2012 ಮತ್ತು 2014ರಲ್ಲಿ ಕೆಕೆಆರ್​ ತಂಡದ ನಾಯಕರಾಗಿ ಪ್ರಶಸ್ತಿ ಗೆದ್ದುಕೊಟ್ಟಿದ್ದ ಗಂಭೀರ್​, ಕಳೆದೆರಡು ವರ್ಷ ಲಖನೌ ಸೂಪರ್​ಜೈಂಟ್ಸ್​ ತಂಡದ ಮೆಂಟರ್​ ಆಗಿದ್ದರು. ಕಳೆದ ನವೆಂಬರ್​ನಲ್ಲಿ ಅವರು ಮತ್ತೆ ಕೆಕೆಆರ್​ ತಂಡದೊಂದಿಗೆ ಕೈಜೋಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net